ವಿಶ್ವದ ಗಜಗಾತ್ರದ ಮಹಿಳೆಯನ್ನು ಮುಂಬೈಗೆ ಕರೆ ತರಲು ಹರಸಾಹಸ

ಮುಂಬೈ, ಡಿ.8: ಕಳೆದ ಎರಡು ದಶಕಗಳಿಂದ ಹಾಸಿಗೆಯಲ್ಲಿ ಮಲಗಿರುವ 500 ಕೆಜಿ ತೂಕದ ಈಜಿಪ್ಟ್ ಪ್ರಜೆ 36ರ ಪ್ರಾಯದ ಇಮಾನ್ ಅಹ್ಮದ್‌ರನ್ನು ಶಸ್ತ್ರಚಿಕಿತ್ಸೆಗಾಗಿ ಕೈರೋದಿಂದ ಮುಂಬೈಗೆ ತರುವುದು ದೊಡ್ಡ ಸವಾಲಾಗಿದೆ. ಯಾವ ವಿಮಾನಗಳೂ ಇಮಾನ್‌ರನ್ನು ಭಾರತಕ್ಕೆ ಕರೆತರಲು ಒಪ್ಪುತ್ತಿಲ್ಲ.
ಕೇಂದ್ರ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ವಿಶ್ವದ ಅತ್ಯಂತ ಭಾರದ ಮಹಿಳೆ ಇಮಾನ್‌ಗೆ ಶಸ್ತ್ರಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಲು ಮೆಡಿಕಲ್ ವೀಸಾದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ, ಇಮಾನ್‌ರನ್ನು ನಗರಕ್ಕೆ ಕರೆ ತರುವುದೇ ದೊಡ್ಡ ತಲೆನೋವಾಗಿ ಕಾಡುತ್ತಿದೆ.
ಕೈರೋಗೆ ನೇರ ಸಂಪರ್ಕದ ವಿಮಾನಗಳಿಲ್ಲ. ಖಾಸಗಿ ವಿಮಾನಗಳು ಅಸಹಾಯಕತೆ ವ್ಯಕ್ತಪಡಿಸಿವೆ. ಯಾವ ಏರ್‌ಲೈನ್ಸ್‌ಗಳು ಇಮಾನ್‌ಗೆ ಚಾರ್ಟರ್ಟ್ ವಿಮಾನ ಒದಗಿಸಲು ಒಪ್ಪುತ್ತಿಲ್ಲ. ಇಮಾನ್‌ರನ್ನು ಕರೆತರಬೇಕಾದರೆ ವಿಮಾನದ ಆಕಾರವನ್ನು ಬದಲಿಸಬೇಕಾಗಿದೆ.
ಏರ್‌ಇಂಡಿಯದ ಸ್ಟ್ರಚರ್‌ಗಳಲ್ಲಿ 136 ಕೆಜಿಗಿಂತ ಕಡಿಮೆ ಇರುವ ರೋಗಿಗಳನ್ನು ಸಾಗಿಸಬಹುದು. ನಮ್ಮ ವಿಮಾನದಲ್ಲಿ ಪ್ರಯಾಣಿಸುವವರು 136ಕ್ಕಿಂತ ಹೆಚ್ಚು ತೂಕವಿದ್ದರೆ ಅವರಿಗೆ ಸ್ಟ್ರಚರ್ ಸೇವೆ ಒದಗಿಸಲಾಗುವುದಿಲ್ಲ ಎಂದು ಏರ್‌ಇಂಡಿಯಾ ಹೇಳಿದೆ.
‘‘ವಿಮಾನಕ್ಕೆ ಅಧಿಕೃತ ಮನವಿ ಮಾಡಿದರೆ ಅದನ್ನು ಪರಿಗಣಿಸಲಾಗುತ್ತದೆ. ಪ್ರಸ್ತುತ ಏರ್‌ಇಂಡಿಯಾ ವಿಮಾನ ಆಫ್ರಿಕಕ್ಕೆ ಹಾರಾಟ ನಡೆಸುತ್ತಿಲ್ಲ. ಜರ್ಮನಿಯ ಫ್ರಾಂಕ್‌ಫರ್ಟ್ ಹತ್ತಿರದ ಏರ್‌ಪೋರ್ಟ್ ಆಗಿದೆ. ಅಹ್ಮದ್‌ರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಕಾರ್ಯಪ್ರವೃತರಾಗಲು ನಾವು ಸಿದ್ಧವಿದ್ದೇವೆ’’ ಎಂದು ಏರ್‌ಇಂಡಿಯಾ ಆಡಳಿತ ನಿರ್ದೇಶಕಿ ಅಶ್ವನಿ ಲೊಹಾನಿ ಹೇಳಿದ್ದಾರೆ.
ಇಮಾನ್ ಅಹ್ಮದ್ ಮುಂಬೈನ ಸೈಫೀ ಹಾಸ್ಪಿಟಲ್‌ನಲ್ಲಿ ವೇಟ್ ಸರ್ಜರಿಗೆ ಒಳಗಾಗಲಿದ್ದಾರೆ. ಸರ್ಜರಿಯ ಬಳಿಕ ಅಹ್ಮದ್ ಮೂರು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
‘‘ಇಮಾನ್‌ರನ್ನು ಮುಂಬೈಗೆ ತರುವುದೇ ದೊಡ್ಡ ಸವಾಲು. ಪ್ರಯಾಣ ಹಾಗೂ ಚಿಕಿತ್ಸೆಯ ವೆಚ್ಚಕ್ಕಾಗಿ ನಿಧಿ ಸಂಗ್ರಹಿಸಲು ‘ಸೇವ್ ಇಮಾನ್’ ಆನ್‌ಲೈನ್ ಅಭಿಯಾನ ಆರಂಭಿಸಿದ್ದೇವೆ. ನಾವು 450 ಕೆಜಿ ತೂಕದ ಆಪರೇಶನ್ ಟೇಬಲ್‌ನ್ನು ವ್ಯವಸ್ಥೆ ಮಾಡಿದ್ಧೇವೆ. ಅದರಲ್ಲಿ ಆಪರೇಶನ್ ಮಾಡಬಹುದು. ಉಳಿದ ಸಾಧನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಇಮಾನ್‌ರನ್ನು ಭಾರತಕ್ಕೆ ಕರೆತರಲು ಹಲವು ಏರ್ ಆ್ಯಂಬುಲೆನ್ಸ್‌ನ್ನು ಸಂಪರ್ಕಿಸಲಾಗಿದೆ. ಯಾರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಖಾಸಗಿ ಏರ್‌ಲೈನ್ಸ್‌ನೊಂದಿಗೆ ಮಾತುಕತೆ ನಡೆಯುತ್ತಿದೆ. ನಾನು ಉಚಿತ ಶಸ್ತ್ರಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದೇನೆ’’ಎಂದು ಸೈಫಿ ಆಸ್ಪತ್ರೆಯ ವೈದ್ಯ ಡಾ.ಮುಫಾಝಲ್ ಲಕ್ಡಾವಾಲಾ ಹೇಳಿದ್ದಾರೆ.







