ಕೇರಳಕ್ಕೆ ತಮಿಳುನಾಡು ಮಾಧ್ಯಮಗಳಿಂದ ಪ್ರಶಂಸೆ

ನಾಗರಕೋಯಿಲ್, ಡಿ. 8: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನಹೊಂದಿದ ವೇಳೆ ಕೇರಳ ಸರಕಾರ ಮತ್ತು ಅಲ್ಲಿನ ಸಾರ್ವಜನಿಕರ ನಿಲುವುಗಳ ಬಗ್ಗೆ ತಮಿಳ್ನಾಡು ಸುದ್ದಿ ಚ್ಯಾನೆಲ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಮರಣಾನಂತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮುಂತಾದವರು ಆಗಮಿಸಿದ್ದರು.
ಆದರೆ, ಕೇರಳದಿಂದ ರಾಜ್ಯಪಾಲ ಪಿ. ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಪ್ರತಿಪಕ್ಷನಾಯಕ ರಮೇಶ್ ಚೆನ್ನಿತ್ತಲ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮುಂತಾದವರು ಒಟ್ಟಿಗೆ ಆಗಮಿಸಿರುವುದು ಸೋಶಿಯಲ್ ಮೀಡಿಯಗಳಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ರಾಜಕೀಯ ನಾಯಕರ ಇಂತಹ ಒಗ್ಗಟ್ಟುಬೇರೆ ರಾಜ್ಯಗಳಲ್ಲಿ ಕಾಣಸಿಗಬಹುದೇ ಎಂದು ಅದರಲ್ಲಿ ಹಲವರು ಪ್ರಶ್ನಿಸಿದ್ದಾರೆ. ಈ ಹಿಂದೆ ಮಾಜಿರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್ ನಿಧನರಾದಾಗ ಕೇರಳದ ರಾಜ್ಯಪಾಲರು, ಮುಖ್ಯಮಂತ್ರಿ, ಪ್ರತಿಪಕ್ಷನಾಯಕರು ರಾಮೇಶ್ವರಕ್ಕೆ ಆಗಮಿಸಿ ಅಂತಿಮ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಲೂ ಸಾಮಾಜಿಕ ಮಾಧ್ಯಮಗಳು ಇದೇ ಪ್ರಶ್ನೆಯನ್ನೆತ್ತಿದ್ದವು.
ನ್ಯೂಸ್ 18 ತಮಿಳುನಾಡು ಬೆಳಗ್ಗಿನ ವಾರ್ತಾವಿಶ್ಲೇಷಣೆಯಲ್ಲಿ ಕೇರಳದ ಈ ಒಗ್ಗಟ್ಟನ್ನು ಪ್ರಸ್ತಾಪಿಸಿದೆ. ಇನ್ನೊಂದು ನ್ಯೂಸ್ ಚ್ಯಾನೆಲ್ ಪುದಿಯ ತಲಮುರದಲ್ಲಿ ಕೇರಳ ಸರಕಾ ರ ತಮಿಳುನಾಡಿನ ಪತ್ರಿಕೆಗಳಿಗೆ ಬುಧವಾರ ನೀಡಿದ್ದ ಜಾಹೀರಾತನ್ನು ಎತ್ತಿಹಿಡಿದಿತ್ತು. ಕೇರಳ ಸರಕಾರ ಜಯಲಲಿತಾರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಜಾಹೀರಾತು ನೀಡಿತ್ತು ಎಂದು ವರದಿ ತಿಳಿಸಿದೆ.





