ಪವಿತ್ರಜಲ ಎಂದು ಮನೋರೋಗದ ಔಷದ ನೀಡುತ್ತಿರುವ ಸನಾತನ ಸಂಸ್ಥೆ

ಮುಂಬೈ,ಡಿ. 8: ತೀವ್ರ ಹಿಂದುತ್ವ ಸಂಘಟನೆಯಾದ ಸನಾತನ ಸಂಸ್ಥೆಯ ಆಶ್ರಮದಲ್ಲಿ ಅಲ್ಲಿರುವವರಿಗೆ ಆಧ್ಯಾತ್ಮಿಕ ಶುದ್ಧೀಕರಣದ ನೆಪದಲ್ಲಿ ಮನೋರೋಗಕ್ಕೆ ನೀಡಲಾಗುವ ಔಷಧವನ್ನು ಪವಿತ್ರಜಲ ಎಂದು ಕುಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಸಿಪಿಐ ನಾಯಕ ಗೋವಿಂದ ಪನ್ಸಾರೆ ಕೊಲೆಪ್ರಕರಣದಲ್ಲಿ ಬಂಧಿಸಲಾದ ಡಾ. ವೀರೇಂದ್ರ ತಾವ್ಡೆ ವಿರುದ್ಧ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಈ ವಿವರ ಇದೆ ಎನ್ನಲಾಗಿದೆ. ಪ್ರಕರಣದ ಆರೋಪಿ ವಿನಯ್ ಪವಾರ್, ಡಾ. ವೀರೇಂದ್ರ ತಾವ್ಡೆಯ ಪತ್ನಿಯರು ನೀಡಿದ ಸಾಕ್ಷ್ಯದಂತೆ ವಿಶೇಷ ತನಿಖಾ ತಂಡ ಕೋರ್ಟಿಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈ ವಿವರಗಳನ್ನು ನಮೂದಿಸಲಾಗಿದೆ.
ಸಿಸೊಫ್ರಿನಿಯ ಮುಂತಾದ ಮನೋರೋಗಕ್ಕೆ ನೀಡಲಾಗುವ ರೆಸ್ಪೆರಿಡಾನ್ ಎಂಬ ಔಷಧವನ್ನು ನೀರಿನಲ್ಲಿ ಮಿಶ್ರ ಮಾಡಿ ನೀಡಲಾಗುತ್ತಿದೆ. ರೋಗವಿಲ್ಲದವರು ನಿರಂತರ ಇದನ್ನು ಸೇವಿಸಿದರೆ ಇನ್ನೊಬ್ಬರು ಹೇಳಿದಂತೆ ಕೇಳುವ ಸ್ಥಿತಿಗೆ ತಲುಪುತ್ತಾರೆ ಎನ್ನಲಾಗಿದೆ. 2013ರಿಂದ ಆಶ್ರಮದಲ್ಲಿ ವಾಸವಿದ್ದ ಒಂದು ವರ್ಷ ಪ್ರತಿದಿನ ಎಂಟು ಗಂಟೆಗೆ ಔಷಧ ಮಿಶ್ರಿತ ಪವಿತ್ರ ಜಲವನ್ನು ಸುಧೇಷ್ಣ ಪಿಂಪಿಲ್ ಎಂಬಆಶ್ರಮದಲ್ಲಿರುವ ವ್ಯಕ್ತಿ ತನಗೆ ನೀಡುತ್ತಿದ್ದರು ಎಂದು ತಾವ್ಡೆಯ ಪತ್ನಿ ಡಾ. ನಿಧಿ ತಾವ್ಡೆ ಸಾಕ್ಷ್ಯ ನೀಡಿದ್ದಾರೆ. ಪವಿತ್ರ ಜಲ ಕುಡಿದರೆ ಅಮಲೇರಿದಂತಾಗುತ್ತಿತ್ತು. ಆಶ್ರಮದ ವೈದ್ಯರು ಬರೆದು ಕೊಟ್ಟ ಮದ್ದನ್ನು ನೀರಿನಲ್ಲಿ ಮಿಶ್ರಣಗೊಳಿಸಲಾಗುತ್ತಿತ್ತು. ಅದು ಮನೋರೋಗಕ್ಕೆ ಬಳಸುವ ರೆಸ್ಪೆರಿಡಾನ್ ಆಗಿದೆ ಎಂದು ಅವರಿಗೆ ಗೊತ್ತಾಗಿತ್ತು. 35ರಷ್ಟಿರುವ ಆಶ್ರಮವಾಸಿಗಳಿಗೆ ಈ ಪವಿತ್ರಜಲವನ್ನು ನೀಡಲಾಗುತ್ತಿದೆ ಎಂದು ಡಾ.ನಿಧಿ ಹೇಳಿದ್ದಾರೆ.ಪತಿಗೆ ವಿಷಯ ತಿಳಿಸಿದಾಗ ಅವರು ಪವಿತ್ರ ಜಲವನ್ನು ಸಮರ್ಥಿಸಿಕೊಂಡಿದ್ದರು ಎಂದು ನಿಧಿ ತನಿಖಾಧಿಕಾರಿಗಳ ಮುಂದೆ ಸಾಕ್ಷ್ಯ ನುಡಿದ್ದಾರೆಂದು ವರದಿ ತಿಳಿಸಿದೆ.







