ಪ್ರಧಾನಿ ಹೇಳಿದ ಸ್ವೈಪ್ ಮೆಶೀನ್ ಬಳಸುವ ಬಿಕ್ಷುಕನ ವೀಡಿಯೊದ ಸತ್ಯ ಇಲ್ಲಿದೆ

ಹೊಸದಿಲ್ಲಿ, ಡಿ.8: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉತ್ತರ ಪ್ರದೇಶದ ಮುರಾದಾಬಾದ್ ನಗರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭ ಜನರಿಗೆ ಕ್ಯಾಶ್ ಲೆಸ್ ಆರ್ಥಿಕತೆಯ ಮಹತ್ವ ಹೇಳುವ ಸಲುವಾಗಿ ಭಿಕ್ಷೆ ಬೇಡುವ ವ್ಯಕ್ತಿಯೊಬ್ಬನ ಬಳಿ ಸ್ವೈಪ್ ಮೆಶೀನ್ ಇರುವ ವಾಟ್ಸ್ ಅಪ್ ವೀಡಿಯೊವೊಂದನ್ನು ಉಲ್ಲೇಖಿಸಿ ಜನರು ಹೆಚ್ಚು ಹೆಚ್ಚಾಗಿ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಒತ್ತು ನೀಡಬೇಕೆಂದು ಹೇಳಿದ್ದರು. ಅವರ ಈ ಉಲ್ಲೇಖದಿಂದಾಗಿ ಆ ಭಿಕ್ಷುಕನ ವೀಡಿಯೊ ಕೂಡ ವೈರಲ್ ಆಗಿತ್ತು. ಆದರೆ ಪ್ರಧಾನಿ ತಮ್ಮ ಭಾಷಣದಲ್ಲಿ ತಮಗೆ ಆ ವೀಡಿಯೊ ಸತ್ಯಾಸತ್ಯತೆಯ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಬರೆದಿದ್ದರು.
ಪ್ರಧಾನಿ ತಮ್ಮ ಭಾಷಣದಲ್ಲಿ ಆ ಭಿಕ್ಷುಕನ ಬಗ್ಗೆ ಉಲ್ಲೇಖಿಸಿದಂದಿನಿಂದ ಹಲವು ಮಾಧ್ಯಮ ಮಂದಿ ಆತನನ್ನು ಹುಡುಕುವ ಯತ್ನ ಮಾಡಿದ್ದರು. ಕೊನೆಗೆ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ತನಿಖೆಯ ಫಲಶ್ರುತಿಯೆಂಬಂತೆ ಆ ವೀಡಿಯೊವನ್ನು ಹೈದರಾಬಾದ್ ನಗರದ ಜೂಲಿ ಹಿಲ್ಸ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ಅದು ನ್ಯೂಮರೋ ಗ್ರಾಫಿಕ್ಸ್ ಕ್ರಿಯೇಟಿವ್ ಸೊಲ್ಯುಶನ್ಸ್‌ಪ್ರೈವೇಟ್ ಲಿ. ಎಂಬ ಕಂಪೆನಿಯ ಪ್ರಚಾರಾರ್ಥ ವೀಡಿಯೋ ಆಗಿತ್ತೆಂದು ತಿಳಿದು ಬಂದಿತ್ತು. ಆ ವೀಡಿಯೊವನ್ನು 2013ರ ನವೆಂಬರ್ ತಿಂಗಳಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ಭಿಕ್ಷುಕನೊಂದಿಗೆ ಆ ವೀಡಿಯೊದಲ್ಲಿ ಕಾಣಿಸುವ ಮಹಿಳೆ ಕಂಪೆನಿಯ ಸಹ ಸಂಸ್ಥಾಪಕಿ ಕುಲಪ್ರೀತ್ ಕೌರ್ ಎಂದೂ ತಿಳಿದು ಬಂದಿತ್ತು.
ಜನರು ತಮ್ಮಲ್ಲಿ ಚೇಂಜ್ ಇಲ್ಲದ ಕಾರಣ ಟ್ರಾಫಿಕ್ ಸಿಗ್ನಲ್ ಬಳಿ ಕಾಣಸಿಗುವ ಭಿಕ್ಷುಕರಿಗೆ ಭಿಕ್ಷೆ ನೀಡುತ್ತಿಲ್ಲವೆಂದು ತಿಳಿದ ಕಂಪೆನಿ ಇಂತಹ ಒಂದು ವಿಶಿಷ್ಟ ವೀಡಿಯೊವನ್ನು ಟ್ರಾಫಿಕ್ ಸಿಗ್ನಲ್ ಬಳಿಯಲ್ಲಿಯೇ ಕೆಂಪು ದೀಪದಿಂದ ಹಸಿರು ದೀಪಕ್ಕೆ ತಿರುಗುವುದರೊಳಗಾಗಿ ಮೊಬೈಲ್ ಮೂಲಕ ಚಿತ್ರೀಕರಿಸಲಾಗಿತ್ತು ಎಂದು ಕೌರ್ ಹೇಳಿದ್ದಾರೆ.
ಬಂಜಾರ ಹಿಲ್ಸ್ ನ ಸಾಯಿ ಗುರುಮಂದಿರದ ಹೊರಗಿರುವ ಭಿಕ್ಷುಕರ ಪೈಕಿ ಒಬ್ಬನಿಗೆ ಸ್ವಲ್ಪ ಹಣ ನೀಡಿ ನಟಿಸುವಂತೆ ಹೇಳಿ ಆತನ ಕೈಗೆ ಸ್ವೈಪ್ ಮೆಶೀನ್ ನೀಡಲಾಗಿತ್ತು. ಆತ ಅಂತೆಯೇ ನಟಿಸಿ ಸ್ವೈಪ್ ಮೆಶೀನ್ ತಮ್ಮ ಕೈಗಿತ್ತು ಅಲ್ಲಿಂದ ಹೊರಟು ಹೋಗಿದ್ದ. ಆತನ ಹೆಸರು ಕೇಳಲು ಮರೆತಿದ್ದೆ ಎಂದು ಕೌರ್ ಹೇಳಿದ್ದಾರೆ.
ತಾವು ಆ ವೀಡಿಯೋ ತಯಾರಿಸುವಾಗ ತಮಗೆ ನೋಟು ಅಮಾನ್ಯಗೊಳ್ಳುವ ವಿದ್ಯಮಾನದ ಬಗ್ಗೆ ಏನೂ ತಿಳಿದಿರಲಿಲ್ಲ. ಅದನ್ನು 2014ರಲ್ಲಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.







