ನೋಟು ರದ್ದತಿ ಕ್ರಮದಿಂದ ಕೃಷಿಕರು,ಕಾರ್ಮಿಕರಿಗೆ ನೆರವಾಗಲಿದೆ:ಪ್ರಧಾನಿ

ಹೊಸದಿಲ್ಲಿ,ಡಿ.8: ತನ್ನ ನೋಟು ರದ್ದತಿ ನಿರ್ಧಾರವನ್ನು ಇಂದು ಬಲವಾಗಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು,ಅದನ್ನು ಹಿಂದು ‘ಯಜ್ಞ ’ ಅಥವಾ ತ್ಯಾಗಕ್ಕೆ ಹೋಲಿಸಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮೋದಿ ಈ ಬಾರಿ ಗ್ರಾಮೀಣ ಭಾರತಕ್ಕೆ ಮತ್ತು ನಗದು ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ಕಾರ್ಮಿಕರಿಗೆ ಅದರಿಂದಾಗುವ ಲಾಭಗಳ ಬಗ್ಗೆ ಮಾತನಾಡಿದ್ದಾರೆ.
ನೋಟು ನಿಷೇಧದಂತಹ ಕ್ರಮಗಳ ಬಗ್ಗೆ ತಾನು ದೇಶಕ್ಕೆ ಎಚ್ಚರಿಕೆ ನೀಡಿದ್ದೆ ಎಂದಿರುವ ಅವರು, ಅಲ್ಪಸಮಯದ ಈ ನೋವು ದೀರ್ಘಾವಧಿಯ ಗಳಿಕೆಗಳಿಗೆ ಸುಗಮ ಮಾರ್ಗವನ್ನು ಕಲ್ಪಿಸಲಿದೆ ಎಂದಿದ್ದಾರೆ.
‘‘ಭ್ರಷ್ಟಾಚಾರ,ಭಯೋತ್ಪಾದನೆ ಮತ್ತು ಕಪ್ಪುಹಣದ ವಿರುದ್ಧ ನಡೆಯುತ್ತಿರುವ ಯಜ್ಞದಲ್ಲಿ ಹೃತ್ಪೂರ್ವಕವಾಗಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದಕ್ಕಾಗಿ ಭಾರತದ ಜನರಿಗೆ ನನ್ನ ವಂದನೆಗಳು’’ ಎಂದು ಟ್ವೀಟಿಸಿರುವ ಅವರು, ದೇಶದ ಬೆನ್ನೆಲುಬಾಗಿರುವ ಕೃಷಿಕರು,ವ್ಯಾಪಾರಿಗಳು ಮತ್ತು ಕಾರ್ಮಿಕರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ್ದಾರೆ.
ಸರಕಾರದ ನಿರ್ಧಾರವು ಈ ದೇಶದ ಆರ್ಥಿಕ ಬೆನ್ನೆಲುಬು ಆಗಿರುವ ಕೃಷಿಕರು,ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ಹಲವಾರು ಲಾಭಗಳನ್ನು ತರಲಿದೆ. ಇನ್ನು ಮುಂದೆ ಗ್ರಾಮೀಣ ಭಾರತದ ಪ್ರಗತಿ ಮತ್ತು ಸಮೃದ್ಧಿಗೆ ಭ್ರಷ್ಟಾಚಾರ ಮತ್ತು ಕಪ್ಪುಹಣ ತಡೆಯನ್ನುಂಟುಮಾಡದು. ನಮ್ಮ ಗ್ರಾಮೀಣ ಜನರಿಗೆ ಅವರ ಹಕ್ಕುಗಳು ದೊರೆಯಲೇಬೇಕು ಎಂದು ಹೇಳಿರುವ ಮೋದಿ,ನೋಟು ರದ್ದತಿಯು ನಗದುರಹಿತ, ತಾಂತ್ರಿಕವಾಗಿ ಮುಂದುವರಿದ ಭಾರತದತ್ತ ಹೆಜ್ಜೆ ಹಾಕಲು ಒಂದು ‘ಐತಿಹಾಸಿಕ ಅವಕಾಶ‘ವಾಗಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
‘‘ನನ್ನ ಯುವಸ್ನೇಹಿತರೇ,ನೀವು ಭಾರತವನ್ನು ಭ್ರಷ್ಟಾಚಾರ ಮುಕ್ತವಾಗಿಸುವ ಮತ್ತು ಹೆಚ್ಚೆಚ್ಚು ನಗದುರಹಿತ ವಹಿವಾಟುಗಳನ್ನು ಸಾಧ್ಯವಾಗಿಸುವ ಬದಲಾವಣೆಗಳ ಮಧ್ಯವರ್ತಿಗಳಾಗಿದ್ದೀರಿ. ನಾವೆಲ್ಲರೂ ಸೇರಿ ಭಾರತವು ಕಪ್ಪುಹಣವನ್ನು ಸೋಲಿಸುವಂತೆ ಮಾಡೋಣ. ಇದು ಬಡವರು,ನವ ಮಧ್ಯಮ ವರ್ಗದವರು,ಮಧ್ಯಮ ವರ್ಗದವರು ಮತ್ತು ಮುಂದಿನ ಪೀಳಿಗೆಗಳಿಗೆ ಲಾಭವನ್ನು ತರಲಿದೆ ’’ಎಂದು ಮೋದಿ ಟ್ವೀಟಿಸಿದ್ದಾರೆ.







