ಅಂಪೈರ್‌ರನ್ನು ಕೆಳಗೆ ಬೀಳಿಸಿದ ಭುವನೇಶ್ವರ್ !

ಮುಂಬೈ, ಡಿ.8: ಭಾರತ ಹಾಗೂ ಇಂಗ್ಲೆಂಡ್ ನಡುವೆ ಗುರುವಾರ ಇಲ್ಲಿ ಆರಂಭವಾದ ನಾಲ್ಕನೆ ಟೆಸ್ಟ್ ಪಂದ್ಯದ ವೇಳೆ ಫೀಲ್ಡರ್ ಭುವನೇಶ್ವರ್ ಕುಮಾರ್ ಎಸೆದ ಚೆಂಡು ಮೈದಾನದಲ್ಲಿದ್ದ ಅಂಪೈರ್ ಪಾಲ್ ರಿಫೆಲ್ ತಲೆಯ ಹಿಂಭಾಗಕ್ಕೆ ತಗಲಿ ಕೆಲ ಕ್ಷಣ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ಚೆಂಡು ತಾಗಿದ ರಭಸಕ್ಕೆ ಕುಸಿದು ಬಿದ್ದ ಅಂಪೈರ್‌ರನ್ನು ಚಿಕಿತ್ಸೆಗಾಗಿ ಮೈದಾನದಿಂದ ಹೊರಗೆ ಕೊಂಡೊಯ್ಯಲಾಯಿತು.
ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ನ 49ನೆ ಓವರ್‌ನಲ್ಲಿ ಈ ಘಟನೆ ನಡೆದಿದೆ. ಚೊಚ್ಚಲ ಪಂದ್ಯ ಆಡಿದ ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಕೀಟನ್ ಜೆನ್ನಿಂಗ್ಸ್ ಸ್ಕ್ವಾರ್ ಲೆಗ್‌ನತ್ತ ಚೆಂಡನ್ನು ತಳ್ಳಿ ಒಂದು ರನ್ ಪಡೆದರು. ತಕ್ಷಣವೇ ಚೆಂಡನ್ನು ತಡೆದ ಭುವನೇಶ್ವರ್ ಅವರು ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್‌ರತ್ತ ಎಸೆದರು. ಆದರೆ, ಚೆಂಡು ಕಾರ್ಯನಿರತರಾಗಿದ್ದ ಅಂಪೈರ್ ತಲೆಯ ಹಿಂಭಾಗಕ್ಕೆ ತಗಲಿತು. ನಿಂತ ಸ್ಥಳದಲ್ಲಿ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ರಿಫೆಲ್‌ಗೆ ಇಂಗ್ಲೆಂಡ್‌ನ ಫಿಜಿಯೋ ಹಾಗೂ ವೈದ್ಯರು ಧಾವಿಸಿ ಬಂದು ಉಪಚಾರ ನೀಡಿದರು.
ಮೈದಾನದಲ್ಲಿ ಪ್ರಥಮ ಚಿಕಿತ್ಸೆ ಪಡೆದ 50ರ ಪ್ರಾಯದ ರಿಫೆಲ್‌ರನ್ನು ಬಳಿಕ ಮೈದಾನದಿಂದ ಹೊರ ಕರೆದುಕೊಂಡು ಹೋಗಲಾಯಿತು. ರಿಫೆಲ್ ಬದಲಿಗೆ ಮರಿಯಸ್ ಎರಾಸ್ಮಸ್ ಕಾರ್ಯನಿರ್ವಹಿಸಿದರು.
ಈ ವರ್ಷಾರಂಭದಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯದ ವೇಳೆ ಇಂತಹದ್ದೇ ಘಟನೆ ನಡೆದಿತ್ತು. ಇಶಾಂತ್ ಶರ್ಮ ಎಸೆತದಲ್ಲಿ ಆ್ಯರೊನ್ ಫಿಂಚ್ ಹೊಡೆದ ಶಕ್ತಿಶಾಲಿ ಹೊಡೆತ ಇಂಗ್ಲೆಂಡ್‌ನ ಅಂಪೈರ್ ರಿಚರ್ಡ್ ಕೆಟ್ಟೆಲ್‌ಬೊರಫ್‌ಗೆ ತಗಲಿತ್ತು. ಚೆಂಡಿನ ಪೆಟ್ಟು ತಿಂದ ರಿಚರ್ಡ್ ಬದಲಿಗೆ ಮೂರನೆ ಅಂಪೈರ್ ಪಾಲ್ ವಿಲ್ಸನ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.







