ಡಿ.ಎಸ್.ಕೃಷ್ಣಪ್ಪಗೌಡರು ನಮಗೆಲ್ಲಾ ಆದರ್ಶ: ಸಿದ್ದರಾಮಯ್ಯ

ಮೂಡಿಗೆರೆ, ಡಿ.8: ಮಹಾತ್ಮ ಗಾಂಧೀಜಿಯಿಂದ ಪ್ರಭಾವಿತರಾಗಿ, ಬ್ರಿಟೀಷರಿಂದ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸಿದ ಡಿ.ಎಸ್.ಕೃಷ್ಣಪ್ಪಗೌಡರು ನಮಗೆಲ್ಲಾ ಆದರ್ಶಪ್ರಾಯರಾಗಿದ್ದಾರೆ. ಕೇವಲ 55 ವರ್ಷಗಳ ಕಾಲ ಮಾತ್ರ ಬದುಕಿದ ಅವರು, ತಮಗಿಂತ ಇಡೀ ಸಮಾಜ ಪರಿವರ್ತನೆಗಾಗಿ ದುಡಿದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಪರಿವರ್ತಕ ದಿ. ಡಿ.ಎಸ್.ಕೃಷ್ಣಪ್ಪಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವೆಷ್ಟು ವರ್ಷ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಬದುಕಿದ ಅವಧಿಯಲ್ಲಿ ಹೇಗೆ ಬದುಕಿದ್ದೇವೆ ಅನ್ನುವುದು ಮುಖ್ಯ. ಹುಟ್ಟು ಅಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಸಾವುಗಳ ನಡುವೆ ನಾವು ಸಮಾಜಮುಖಿಯಾಗಿ ಬದುಕಿದ್ದೇವೆಯೇ ಎನ್ನುವುದು ಮುಖ್ಯ. ಯಾರು ಸಮಾಜಮುಖಿಯಾಗಿ ಬದುಕುವರೋ ಅವರು ಸಾಧಕರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರತಿಯೊಬ್ಬರೂ ಕೂಡ ಬದುಕಿನಲ್ಲಿ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ತತ್ವ, ಸಿದ್ದಾಂತಕ್ಕೆ ಬದ್ದವಾಗಿ ಬದುಕಬೇಕು. ಡಿ.ಎಸ್.ಕೃಷ್ಣಪ್ಪಗೌಡರು ಸಾಮಾನ್ಯ ರೈತರ ಕುಟುಂಬದಲ್ಲಿ ಹುಟ್ಟಿ ಹಳ್ಳಿಯಲ್ಲಿ ಸಿಕ್ಕಿದ ಶಿಕ್ಷಣ ಪಡೆದು ಬದುಕನ್ನು ಸಮಾಜಮುಖಿಯಾಗಿ ನಡೆಸಿದ್ದಾರೆ. ಅವರ ಬದುಕಿನಲ್ಲಿ ನೈತಿಕತೆ ರೂಡಿಸಿಕೊಂಡು ಪರೋಪಕಾರಿಯಾಗಿ ಬದುಕಿದ್ದಾರೆ. ಅವರು ಸತ್ಯ, ಅಹಿಂಸೆ, ಗಾಂದಿವಾದಿಯಾಗಿ, ಅಸ್ಪಷ್ಯತೆ ನಿವಾರಣೆಗಾಗಿ, ವೈಚಾರಿಕತೆ ಬೆಳೆಸಿಕೊಂಡು, ಜಾತ್ಯಾತೀತ ತತ್ವವನ್ನು ಮೈಗೂಡಿಸಿಕೊಂಡಿದ್ದರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ.ಪರಮೆಶ್ವರ್ ಮಾತನಾಡಿ, ಮೋದಿ ಸರಕಾರ 500/1000ದ ನೋಟು ರದ್ದತಿ ಮೂಲಕ ಬದಲಾವಣೆಗೆ ಮುಖಮಾಡಿರುವುದು ಸ್ವಾಗತಾರ್ಹ. ಆದರೆ ಇದರಿಂದ ಜನಸಾಮಾನ್ಯರಿಗೆ ತೊಂದರೆ ಜತೆಗೆ ಭವಿಷ್ಯದಲ್ಲಿ ಸಮಸ್ಯೆ ತಲೆದೋರುವ ಅನುಮಾನವಿದೆ. ನಾವು ಆಶಾವಾದಿಗಳು ಎಲ್ಲವನ್ನೂ ಸಹಿಸುವ ತಾಳ್ಮೆ ಇದೆ ಎಂದ ಅವರು, ಕಳೆದ ಮೂರೂವರೆ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಸರಕಾರ ಆರ್ಥಿಕ ವ್ಯವಸ್ಥೆ, ಹಣಕಾಸು ಕಾಪಾಡುವ ದಾರಿಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸಿದ್ದರಾಮಯ್ಯ ಸರಕಾರ ಜನರಿಗೆ ನೀಡಿದ ಭರವಸೆಯಂತೆ ಪ್ರಾಮಾಣಿಕವಾಗಿ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಚರಿತ್ರೆಯ ಪುಟದಲ್ಲಿ ಮೂಡಿಗೆರೆ ಪ್ರಮುಖ ಸ್ಥಾನದಲ್ಲಿದ್ದು, ಹೊಯ್ಸಳ ಮೂಲಸ್ಥಳ ಇದಾಗಿದೆ. ಇಲ್ಲಿ ಅಧಿಕಾರವಿಲ್ಲದೆ ಶ್ರೀಸಾಮಾನ್ಯನ ಜತೆ ನಿಂತ ವ್ಯಕ್ತಿ ದಿ. ಡಿ.ಎಸ್.ಕೃಷ್ಣಪ್ಪಗೌಡರಾಗಿದ್ದಾರೆ. ಸರಳ ಜೀವನದಲ್ಲಿ ದಿಟ್ಟ ನಿರ್ಧಾರ ತಳೆದಿರುವ ಕೃಷ್ಣಪ್ಪಗೌಡರು ನಮಗೆ ಆದರ್ಶವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಿ. ಡಿ.ಎಸ್.ಕೃಷ್ಣಪ್ಪಗೌಡರ ಜೀವನ ಚರಿತ್ರೆ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಬಿಡುಗಡೆಗೊಳಿಸಿದರು.
ಪುಸ್ತಕ ಬರೆದ ಲೇಖಕ ಹಾಗೂ ಸಂಶೋಧಕ ಪ್ರೊ.ಡಿ.ಎಸ್.ಜಯಪ್ಪಗೌಡರನ್ನು ಸನ್ಮಾನಿಸಲಾಯಿತು.
ವಿಕಲಚೇತರಿಗೆ ಗಾಲಿ ಕುರ್ಚಿಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿತರಿಸಿದರು.
ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಡಿ.ಬಿ.ಸುಬ್ಬೇಗೌಡ ಅಧ್ಯಕ್ಷತೆ ವಹಿಸಿದ್ದರು.
ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಸ್ವಾಮೀಜಿ ಶ್ರೀಶ್ರೀಶ್ರೀ ನಿರ್ಮಲಾನಂದ ಸ್ವಾಮೀಜಿ ಧಿವ್ಯ ಸಾನ್ನೀಧ್ಯ ವಹಿಸಿದ್ದರು. ಶಂಬುನಾಥಸ್ವಾಮೀಜಿ, ಹಾಸನದ ಬಸವಾನಂದ ಸ್ವಾಮೀಜಿ ಆಶಿರ್ವಚನ ನೀಡಿದರು.
ವೇದಿಕೆಯಲ್ಲಿ ಶಾಸಕರಾದ ಬಿ.ಬಿ.ನಿಂಗಯ್ಯ, ಸಿ.ಟಿ.ರವಿ, ಜಿ.ಎಚ್.ಶ್ರೀನಿವಾಸ್, ಡಿ.ನ್.ಜೀವರಾಜ್, ಎಂಎಲ್‌ಸಿಗಳಾದ ಶ್ರೀಮತಿ ಡಾ.ಮೊಟಮ್ಮ, ಎಂ.ಕೆ.ಪ್ರಾಣೇಶ್, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಕೇಂದ್ರ ಸಚಿವೆ ಶ್ರೀಮತಿ ತಾರದೇವಿ, ಸಿದ್ದಾರ್ಥ ರೆಡ್ಡಿ, ಮಾಜಿ ಮಂತ್ರಿ ಡಿ.ಬಿ.ಚಂದ್ರೇಗೌಡ, ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಹೆಚ್.ಎಂ.ವಿಶ್ವನಾಥ್,ಎಸ್.ವಿ.ಮಂಜುನಾಥ್, ತಾಪಂ ಅಧ್ಯಕ್ಷ ಕೆ.ಸಿ.ರತನ್, ಸದಸ್ಯ ರಂಜನ್ ಅಜೀತ್ ಕುಮಾರ್, ಮಾಜಿ ಎಂಎಲ್‌ಸಿ ಶ್ರೀಮತಿ ಗಾಯತ್ರಿ ಶಾಂತೇಗೌಡ, ಅರಣ್ಯ ವಸತಿ ವಿಹಾರಧಾಮದ ಅಧ್ಯಕ್ಷ ಎ.ಎನ್.ಮಹೇಶ್, ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷ ಎಚ್.ಪಿ.ಮೋಹನ್, ಸಾಹಿತಿ ರಾಜೇಶ್ವರಿ ತೇಜಸ್ವಿ, ಮಂಗಳೂರಿನ ಕಣಚೂರು ವೈಧ್ಯಕೀಯ ಸಂಸ್ಥೆಯ ಮೋಣು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಹೇಮಶೇಖರ್, ಪಪಂ ಅಧ್ಯಕ್ಷೆ ರಮೀಜಾಬಿ, ಯು.ಆರ್.ಚಂದ್ರೇಗೌಡ, ಯು.ಎನ್.ಚಂದ್ರೇಗೌಡ, ಹಳಸೆ ಕೋಮಲಮ್ಮ ಬೈರೇಗೌಡ, ಎನ್.ಆರ್.ನಾಗರತ್ನ, ಪತ್ರಕರ್ತ ಸ.ಗಿರಿಜಾಶಂಕರ್ ಮತ್ತಿತರರಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಸ್ವಾಗತಿಸಿದರು. ವೆಂಕಟೇಶ್ ನಿರೂಪಿಸಿದರು.







