ನೋಟಿನೇಟಿಗೆ ತಿಂಗಳು: ಪ್ರಧಾನಿ ಪರಿಸ್ಥಿತಿಯನ್ನು ಸ್ಪಷ್ಟೀಕರಿಸಲಿ: ಮಮತಾ

ಕೋಲ್ಕತಾ, ಡಿ.8: ನೋಟು ರದ್ದತಿಯಾದ ಬಳಿಕ ಒಂದು ತಿಂಗಳಲ್ಲಿ ಜನರು ಕಿರುಕುಳ ಹಾಗೂ ಆರ್ಥಿಕ ಆಭದ್ರತೆಗೆ ಒಳಗಾಗಿದ್ದಾರೆಂದು ಪ್ರತಿಪಾದಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ರಾಷ್ಟ್ರಕ್ಕೆ ಪರಿಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಹಾಗೂ ಅದರ ಸಂಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳಬೇಕೆಂದು ಗುರುವಾರ ಆಗ್ರಹಿಸಿದ್ದಾರೆ.
ನೋಟು ರದ್ದತಿಯ ಸಂಕಷ್ಟದಿಂದಾಗಿ 90 ಮಂದಿ ಸಾವಿಗೀಡಾಗಿದ್ದಾರೆಂದು ಪ್ರತಿಪಾದಿಸಿದ ಅವರು, ಇದು ಕಿರುಕುಳ, ನೋವು, ಹತಾಶೆ, ಆರ್ಥಿಕ ಅಭದ್ರತೆ ಹಾಗೂ ಸರ್ವನಾಶದ ತಿಂಗಳಾಗಿತ್ತೆಂದು ಟೀಕಿಸಿದ್ದಾರೆ.
ನ.8ರಂದು ನೋಟು ರದ್ದುಪಡಿಸುವ ಕರಿ ನಿರ್ಧಾರವನ್ನು ಘೋಷಿಸಿದ ಮೇಲೆ ಜನ ಸಾಮಾನ್ಯರು ಪಡೆದಿರುವುದು ಇಷ್ಟೇ. ಪ್ರಧಾನಿ ದೇಶಕ್ಕೆ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿ, ಇದರ ಸಂಪೂರ್ಣ ಹೊಣೆ ಹೊರಬೇಕೆಂದು ಮಮತಾ ಹೇಳಿದ್ದಾರೆ.
ನೋಟು ರದ್ದತಿಯಿಂದ ಯಾವುದೇ ಕಪ್ಪುಹಣ ಪತ್ತೆಯಾಗಿಲ್ಲವೆಂದು ಪ್ರತಿಪಾದಿಸಿದ ಅವರು, ಕೇವಲ ಜನ ಸಾಮಾನ್ಯರ ಬಿಳಿ ಹಣವನ್ನು ಕಸಿದುಕೊಳ್ಳಲಾಗಿದೆ. ವಿದೇಶಗಳಿಂದಲೂ ಕಪ್ಪುಹಣ ವಶಪಡಿಸಿಕೊಳ್ಳಲಾಗಿಲ್ಲ. ತಥಾ ಕಥಿತ ಕಪ್ಪು ಹಣ ಪತ್ತೆಯ ಹೆಸರಲ್ಲಿ ಕೇಂದ್ರದ ಆಳುವ ಪಕ್ಷವು ಜಮೀನು, ಬ್ಯಾಂಕ್ ಠೇವಣಿ, ಚಿನ್ನ, ವಜ್ರಗಳ ರೂಪದಲ್ಲಿ ಆಸ್ತಿ ಸೃಷ್ಟಿಸಿದೆ ಹಾಗೂ ಹೆಚ್ಚು ಹೆಚ್ಚು ಬಂಡವಾಳಶಾಹಿಯಾಗಿದೆಯೆಂದು ಆರೋಪಿಸಿದ್ದಾರೆ.
ಉತ್ಪಾದನೆ ಭೂಮಿಗಿಳಿದಿದೆ. ಕೃಷಿ ಚಟುವಟಿಕೆಗಳು ನಾಶವಾಗಿವೆ. ಕೊಳ್ಳುವುದು ಹಾಗೂ ಮಾರುವುದು ತೀವ್ರ ಇಳಿಕೆಯಾಗಿದೆ. ಆರ್ಥಿಕತೆ ಕಂಪಿಸುತ್ತಿದೆ. ಇಡೀ ದೇಶವು ಅಭೂತಪೂರ್ವ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಸಾಗುತ್ತಿದೆಯೆಂದು ಮಮತಾ ಕಿಡಿಗಾರಿದ್ದಾರೆ.







