ಚಂಡಮಾರುತ ಹವಾಮಾನ: ಅಂಡಮಾನ್‌ನಲ್ಲಿ 1,400 ಪ್ರವಾಸಿಗರು ಅತಂತ್ರ

ಹೊಸದಿಲ್ಲಿ, ಡಿ.8: ಭಾರೀ ಮಳೆ ಹಾಗೂ ಚಂಡಮಾರುತದಂತಹ ಹವಾಮಾನ ಪರಿಸ್ಥಿತಿಯ ಬಳಿಕ ಸುಮಾರು 1,400 ಮಂದಿ ಪ್ರವಾಸಿಗರು ಅಂಡಮಾನ್‌ನ ಹೇವ್ಲೋಕ್ ಹಾಗೂ ನೀಲ್ ದ್ವೀಪಗಳಲ್ಲಿ ಸಿಲುಕಿದ್ದು, ಅವರ ತೆರವಿಗೆ ಹವಾಮಾನ ಪರಿಸ್ಥಿತಿ ಸವಾಲಾಗಿದೆ. ಆದರೆ, ಪ್ರತಿಯೊಬ್ಬರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಗಾಬರಿಪಡದಿರುವಂತೆ ಪ್ರವಾಸಿಗಳ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.
ಚಂಡಮಾರುತದ ತೀಕ್ಷ್ಣತೆ ಕಡಿಮೆಯಾದೊಡನೆಯೇ ಸರಕಾರವು ರಕ್ಷಣಾ ಕಾರ್ಯಾಚರಣೆ ಆರಂಭಿಸಲಿದೆ. ಪೋರ್ಟ್ ಬ್ಲೇರ್‌ನಲ್ಲಿ ರಕ್ಷಣಾ ತಂಡಗಳು ಸಿದ್ಧವಾಗಿವೆಯೆಂದು ಅವರು ತಿಳಿಸಿದ್ದಾರೆ.
ಸಿಲುಕಿಕೊಂಡಿರುವವರ ತೆರವಿಗಾಗಿ ನೌಕಾಪಡೆಯು ಬಿತ್ರಾ, ಬಂಗಾರಂ, ಕುಂಭೀರ್ ಹಾಗೂ ಎಲ್‌ಸಿಯು 38 ಎಂಬ 4 ಹಡಗುಗಳನ್ನು ಕಳುಹಿಸಿದೆ. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ನಿನ್ನೆ ಅವುಗಳಿಗೆ ಬಂದರು ಸೇರುವುದು ಸಾಧ್ಯವಾಗಿಲ್ಲ.
ಹಡಗುಗಳು ಬಂದರಿನ ಹೊರಗೆ ಕಾಯುತ್ತಿವೆ. ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವುದಕ್ಕಾಗಿ ಸಾಕಷ್ಟು ಆಹಾರ, ಶುದ್ಧ ನೀರು, ಔಷಧಗಳು, ವೈದ್ಯರು, ಮುಳುಗುಗಾರರು ಹಾಗೂ ಸ್ಥಳೀಯಾಡಳಿತದ ಸಿಬ್ಬಂದಿಯನ್ನು ಕಳುಹಿಸಲಾಗಿದೆಯೆಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಆಡಳಿತವು ‘ಎಲ್ 1’ ವಿಕೋಪವನ್ನು ಘೋಷಿಸಿದೆ.







