ನೋಟು ರದ್ದತಿಗೆ ತಿಂಗಳು: ಕಡಿಮೆಯಾಗಿಲ್ಲ ಜನರ ಗೋಳು!

ಮುಂಬೈ, ಡಿ.8: ನೋಟು ರದ್ದತಿಯ ಒಂದು ತಿಂಗಳ ಬಳಿಕವೂ ಮುಂಬೈ ಮಹಾನಗರ ಹಾಗೂ ನೆರೆಹೊರೆಯ ಪ್ರದೇಶಗಳಲ್ಲಿ ಜನರು ನಗದು ಹಣಕ್ಕಾಗಿ ಪಡಿಪಾಟಲು ಪಡುತ್ತಿದ್ದಾರೆ. ಇದರಿಂದಾಗಿ ಅವರ ಮಾಸಿಕ ಪಾವತಿಗಳು ಹಾಗೂ ವ್ಯವಹಾರಗಳಿಗೆ ತೊಂದರೆ ಮುಂದುವರಿದಿದೆ.
ನಿಷ್ಕ್ರಿಯ ಎಟಿಎಂಗಳು ಇನ್ನೂ ಕಾರ್ಯಾಚರಣೆ ಆರಂಭಿಸದಿರುವುದು ಈ ಸಂಕಷ್ಟಕ್ಕೆ ಮುಖ್ಯ ಕಾರಣವೆಂದು ಜನರು ಹೇಳುತ್ತಿದ್ದಾರೆ.
ಸಣ್ಣ ಅಥವಾ ದೊಡ್ಡ ವ್ಯವಹಾರಗಳಿಗೆ ನಗದು ರಹಿತ ವಿಧಾನವನ್ನು ಪ್ರತಿಯೊಬ್ಬನೂ ಅಳವಡಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡುತ್ತಿದ್ದಾರೆ. ಹಾಗಾದರೆ, ದೇಶದಲ್ಲಿ ಇಷ್ಟೊಂದು ಎಟಿಎಂಗಳು ಯಾಕೆ? ಅವುಗಳನ್ನು ಕಿತ್ತು ತೆಗೆಯಿರಿ. ಅವು ಹೇಗೂ ಉಪಯುಕ್ತವಾಗಿಲ್ಲ. ಈ ಎಟಿಎಂಗಳು ನಗದುರಹಿತವಾಗಿವೆಯೆಂದು ನೊಂದ, ಘಾಟ್ಕೋಪರ್‌ನ ಬಟ್ಟೆ ವ್ಯಾಪಾರಿ ಕಲ್ಪೇಶ್ ಜೈನ್ ಎಂಬವರು ಹರಿಹಾಯ್ದಿದ್ದಾರೆ.
ಇಂದು ಮುಂಜಾನೆ ಸಹ ಮುಂಬೈಗರು ಹಾಗೂ ಹೊರ ವಲಯದಲ್ಲಿ ವಾಸಿಸುವ ಜನರು ತಿಂಗಳ ಪಾವತಿಗಳಿಗೆ ಹಣಕ್ಕಾಗಿ ಎಟಿಎಂಗಳ ಮುಂದೆ ಸಾಲುಗಟ್ಟಿರುವುದು ಕಂಡುಬಂದಿದೆ. ನಗದಿನ ಕೊರತೆಯಿಂದ ಬ್ಯಾಂಕುಗಳು ಗ್ರಾಹಕರಿಗೆ ಹಣ ನೀಡಲು ನಿರಾಕರಿಸುತ್ತಿದ್ದುದರಿಂದ ಹಲವರು ನಿರಾಶರಾಗಿದ್ದರು.
ಕಮಲಾ ಮಿಲ್ ಕಾಂಪೌಂಡ್‌ನ ಬ್ಯಾಂಕ್ ಶಾಖೆಯೊಂದು ಕಳೆದೆರಡು ದಿನಗಳಿಂದ ನಗದು ಪಾವತಿಯನ್ನು ನಿಲ್ಲಿಸಿದೆ. ತಾವು ಕೇವಲ ಠೇವಣಿಗಳನ್ನಷ್ಟೇ ಸ್ವೀಕರಿಸುತ್ತೇವೆಂಬ ಫಲಕವನ್ನು ಹೊರಗೆ ಹಾಕಿದ್ದಾರೆಂದು ಲೋವರ್ ಪರೇಲ್‌ನ ವಾರಿಸ್‌ಶೇಖ್ ಎಂಬವರು ತಿಳಿಸಿದ್ದಾರೆ.
ಒಂದು ತಿಂಗಳು ಕಳೆದರೂ ಹಣ ಚಲಾವಣೆಯಲ್ಲಿ ಗಮನಾರ್ಹ ಪ್ರಗತಿಯಾಗಿಲ್ಲ. ತಾವೀಗಲೂ ಹಣವಿಲ್ಲದ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಉದ್ದದ ಕ್ಯೂಗಳಲ್ಲಿ ನಿಲ್ಲುವಂತಾಗಿದೆಯೆಂದು ಠಾಣೆ ಜಿಲ್ಲೆಯ ವಿಮಲಾ ತ್ರಿಪಾಠಿಯೆಂಬ ಗೃಹಿಣಿ ಅಸಮಾಧಾನ ಹೊರ ಹಾಕಿದ್ದಾರೆ.







