ಸಂಸತ್ ಕಲಾಪಕ್ಕೆ ವ್ಯತ್ಯಯ: ಸ್ಫೋಟಿಸಿದ ರಾಷ್ಟ್ರಪತಿ ಆಕ್ರೋಶ

ಹೊಸದಿಲ್ಲಿ,ಡಿ.8: ಸಂಸತ್ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡುತ್ತಿರುವುದಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯರು ನಿನ್ನೆಯಷ್ಟೇ ಸಂಸದರನ್ನು ಕಟುವಾಗಿ ಟೀಕಿಸಿದ್ದ ಬೆನ್ನಿಗೇ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಆಕ್ರೋಶ ಇಂದು ಸ್ಫೋಟಗೊಂಡಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಬಿಕ್ಕಟ್ಟು ಮುಂದುವರಿದಿರುವ ಬಗ್ಗೆ ಸಂಸದರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಅವರು,‘‘ದಯವಿಟ್ಟು ನಿಮ್ಮ ಕೆಲಸವನ್ನು ಮಾಡಿ ’’ ಎಂದು ಅವರಿಗೆ ಕಿವಿಮಾತು ಹೇಳಿದ್ದಾರೆ.
ನ.16ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಂಡಾಗಿನಿಂದಲೂ ನೋಟು ರದ್ದತಿ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಜಟಾಪಟಿಯಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆಗಳು ಪದೇಪದೇ ಮುಂದೂಡಿಕೆಯಾಗುತ್ತಿವೆ. ನಿಮ್ಮ ಕೆಲಸವನ್ನು ಮಾಡಿ. ಸಂಸತ್ತಿನಲ್ಲಿ ಕಲಾಪಗಳನ್ನು ನಡೆಸಲೆಂದೇ ನೀವಿದ್ದೀರಿ. ಸಂಸತ್ತಿನ ಕಲಾಪಗಳಿಗೆ ವ್ಯತ್ಯಯವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮುಖರ್ಜಿ ಹೇಳಿದರು.
ರಕ್ಷಣಾ ಇಲಾಖೆಯ ಕಾರ್ಯಕ್ರಮದಲ್ಲಿ ‘ಪ್ರಬಲ ಪ್ರಜಾಪ್ರಭುತ್ವಕ್ಕಾಗಿ ಸುಧಾರಣೆಗಳು’ ಕುರಿತು ಉಪನ್ಯಾಸ ನೀಡಿದ ಅವರು, ಜನರು ದೇಶಕ್ಕಾಗಿ ಕೆಲಸ ಮಾಡಲೆಂದು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುತ್ತಾರೆಯೇ ಹೊರತು ಪ್ರತಿಭಟನೆಗಳನ್ನು ಮಾಡುವುದಕ್ಕಲ್ಲ. ಸಂಸದೀಯ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡುವುದು ಒಂದು ವಾಡಿಕೆಯಾಗಿಬಿಟ್ಟಿದೆ ಮತ್ತು ಇದು ತನಗೆ ಕಳವಳವನ್ನುಂಟು ಮಾಡಿದೆ ಎಂದರು.
ಪ್ರತಿಭಟನೆಗಳನ್ನು ಬೇರೆ ಕಡೆಗಳಲ್ಲಿ ನಡೆಬಹುದು ಎಂದ ಅವರು,ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗಳನ್ನು ನಡೆಸುವಂತೆ ಸಂಸದರನ್ನು ಆಗ್ರಹಿಸಿದರು.
ಮತ್ತೆ ಸಂಸತ್ತು ಮುಂದೂಡಿಕೆ
ಮತದಾನಕ್ಕೆ ಅವಕಾಶ ಕಲ್ಪಿಸುವ ನಿಯಮದಡಿ ನೋಟು ರದ್ದತಿ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಸತತ 15ನೆಯ ದಿನವಾದ ಗುರುವಾರವೂ ಲೋಕಸಭೆಯ ಕಲಾಪಗಳು ವ್ಯತ್ಯಯಗೊಂಡವು.
ಬೆಳಿಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ವಿಷಯವನ್ನು ಪ್ರಸ್ತಾಪಿಸಲು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಾದಾಗ ಅನುಮತಿಯನ್ನು ನಿರಾಕರಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಪ್ರಶ್ನೆವೇಳೆಗೆ ಚಾಲನೆ ನೀಡಿದರು.
ತಕ್ಷಣ ಕಾಂಗ್ರೆಸ್,ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಸದನದ ಅಂಗಳಕ್ಕೆ ನುಗ್ಗಿ ನೋಟು ರದ್ದತಿಯ ಕುರಿತು ಚರ್ಚೆಗೆ ಆಗ್ರಹಿಸಿದರು. ಈ ಬೇಡಿಕೆಯನ್ನು ಒಪ್ಪಲು ಸ್ಪೀಕರ್ ನಿರಾಕರಿಸಿದಾಗ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದರು. ಗದ್ದಲ ನಿಲ್ಲದಿದ್ದಾಗ ವಿಚಲಿತರಾದ ಸ್ಪೀಕರ್ ತಮ್ಮ ಪ್ರತಿಭಟನೆಗಳಿಂದ ಇಡೀ ಸದನಕ್ಕೆ ತೊಂದರೆಯನ್ನುಂಟು ಮಾಡದಂತೆ ಪ್ರತಿಪಕ್ಷ ಸದಸ್ಯರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಎಸ್‌ಪಿ ಮತ್ತು ಎನ್‌ಸಿಪಿ ಸದಸ್ಯರೂ ತಮ್ಮ ಆಸನಗಳಿಂದ ಎದ್ದು ನಿಂತು ಪ್ರತಿಭಟನಾ ನಿರತ ಸದಸ್ಯರಿಗೆ ಬೆಂಬಲ ವ್ಯಕ್ತಪಡಿಸಿದರು.
ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದ ಮಹಾಜನ್,ಅದು ಮರುಸಮಾವೇಶಗೊಂಡಾಗಲೂ ಕೋಲಾಹಲ ಮುಂದುವರಿದಿದ್ದರಿಂದ ದಿನದ ಮಟ್ಟಿಗೆ ಮುಂದೂಡಿದರು. ಅತ್ತ ರಾಜ್ಯಸಭೆಯಲ್ಲಿಯೂ ಚಿತ್ರಣ ಭಿನ್ನವಾಗಿರಲಿಲ್ಲ. ಪ್ರತಿಪಕ್ಷ ಸದಸ್ಯರ ಗದ್ದಲ-ಕೋಲಾಹಲಗಳಿಂದ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.







