ಜ.26ರ ಬಳಿಕ ಕ್ರಾಂತಿಕಾರಿ ಹೋರಾಟ: ಗಣೇಶ್ ಕಾರ್ಣಿಕ್
ಎತ್ತಿನಹೊಳೆ ವಿರೋಧಿಸಿ ಸಪ್ತಕ್ಷೇತ್ರ ರಥಯಾತ್ರೆ

ಮಂಗಳೂರು, ಡಿ. 8: ನೇತ್ರಾವತಿ ನದಿಉಳಿವಿಗಾಗಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಡಿ. 10,11,12ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯ ಬಳಿಕ ಜ.26ರ ಬಳಿಕ ಕ್ರಾಂತಿಕಾರಿ ಹೋರಾಟ ಮುಂದುವರಿಸುವುದಾಗಿ ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ರಥಯಾತ್ರೆಯ ಪೂರ್ವಭಾವಿಯಾಗಿ ಗುರುವಾರ ನಗರದ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ನಡೆದ ವಿವಿಧ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ನದಿ ಬತ್ತಿದರೆ ಕರಾವಳಿ ಪ್ರದೇಶ ಬರಿದಾಗಲಿದೆ. ಈಗಾಗಲೇ ಎತ್ತಿನಹೊಳೆ ಯೋಜನೆಯ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿವೆ, ಜ.26ರವರೆಗೆ ಸರಕಾರದ ನಿರ್ಧಾರಕ್ಕಾಗಿ ಕಾಯುತ್ತೇವೆ. ಸರಕಾರದ ಸ್ಪಂದನೆ ಸಿಗದಿದ್ದರೆ ಕ್ರಾಂತಿಕಾರಿ ಹೋರಾಟವನ್ನು ಮುಂದುವರಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಯ ಸಂಚಾಲಕ ಕೆ.ಮೋನಪ್ಪ ಭಂಡಾರಿ ಮಾತನಾಡಿ, ಜೀವನದಿ ನೇತ್ರಾವತಿಯನ್ನು ಬರಿಡಾಗಲು ಬಿಡಬಾರದು. ಕೋರ್ಟ್ ಆಜ್ಞೆಯನ್ನು ಉಲ್ಲಂಸಿ ಕಾಮಗಾರಿ ನಡೆಯುತ್ತಿದೆ. ಸರಕಾರ ಈ ಭಾಗದ ಜನತೆಯ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕ್ರೈಸ್ತ ಧರ್ಮಗುರು ಫಾ.ವಿಲಿಯಂ ಮಾತನಾಡಿ, ನದಿ ಉಳಿವಿಗಾಗಿ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ಕ್ರೈಸ್ತ ಸಮುದಾಯ ನೀಡಲಿದೆ ಎಂದು ಭರವಸೆ ನೀಡಿದರು.
ಹೋರಾಟಗಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ನದಿ ಉಳಿವಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಜನರ ಹೋರಾಟವನ್ನು ಸರಕಾರ ಕಡೆಗಣಿಸಿದೆ. ಈ ಭಾಗದ ಜನತೆಯ ಅಳಲು ಆಲಿಸಲು ಸಭೆಯನ್ನೂ ಕರೆದಿಲ್ಲ.ಯೋಜನೆಯಿಂದ 50 ಕೋಟಿ ಹಣ ಮೂವರು ಮಂತ್ರಿಗಳ ಪಾಲಾಗಿವೆ ಎಂದರು.
ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಂ.ಎಸ್. ಮಸೂದ್ ಮಾತನಾಡಿ, ನೇತ್ರಾವತಿ ಉಳಿವಿಗಾಗಿ ಮುಸ್ಲಿಂ ಸಮುದಾಯ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದರು.
ಜಿಲ್ಲೆಯ ನದಿ ಕಣ್ಮರೆಯಾಗುವ ಕಾಲ ಬಂದಿದ್ದರೂ ಜನತೆ ಗಾಢ ನಿದ್ದೆಯಲ್ಲಿದ್ದಾರೆ. ಅವರನ್ನು ಎಚ್ಚರಿಸುವ ಕೆಲಸ ಆಗಬೇಕು. ಸಂಘಟಿತ ಹೋರಾಟ ಮಾಡಬೇಕು ಎಂದು ರಥಯಾತ್ರೆ ಸಮಿತಿಯ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.
ಜಿಲ್ಲೆಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಬೇಕಾದ ಜಿಲ್ಲೆಯ ಶಾಸಕರು, ಮಂತ್ರಿಗಳು ವೌನ ವಹಿಸಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂದು ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರರಾದ ಎಂಜಿ.ಹೆಗಡೆ. ವಿಜಯಕುಮಾರ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಥಯಾತ್ರೆ ಸಮಿತಿಯ ಪ್ರಮುಖರಾದ ಪುರುಷೋತ್ತಮ ಚಿತ್ರಾಪುರ, ಎನ್.ಯೋಗೀಶ ಭಟ್, ದಿನಕರ ಶೆಟ್ಟಿ, ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ದಾನ ಮೊದಲಾದವರು ಉಪಸ್ಥಿತರಿದ್ದರು.