ಹೆಜ್ಜೇನು ಕಡಿತಕ್ಕೆ ವೃದ್ದೆ ಸಾವು : ಮೂವರಿಗೆ ಗಾಯ

ಉಳ್ಳಾಲ, ಡಿ.8: ಹೆಜ್ಜೇನು ಕಡಿದು ಗಂಭೀರ ಗಾಯಗೊಂಡಿದ್ದ ಮಹಿಳೆಯೋರ್ವರು ಮೃತಪಟ್ಟು, ಇತರ ಮೂವರು ಗಾಯಗೊಂಡಿರುವ ಘಟನೆ ಸೋಮೇಶ್ವರ ಪಂಚಾಯತ್ ವ್ಯಾಪ್ತಿಯ ಪಿಲಾರು ಲಕ್ಷ್ಮಿಗುಡ್ಡೆ ಎಂಬಲ್ಲಿ ಇಂದು ಸಂಜೆ ವೇಳೆ ನಡೆದಿದೆ.
ಮೃತ ಮಹಿಳೆಯನ್ನು ಉಳಾಯಿಬೆಟ್ಟು ನಿವಾಸಿ ಕಮಲಾ (65) ಎಂದು ಗುರುತಿಸಲಾಗಿದೆ.
ಶ್ರೀ ಧರ್ (49), ಪತ್ನಿ ಲೀಲಾವತಿ (45) ಮತ್ತು ತಾಯಿ ಜಾನಕಿ (70) ಎಂಬವರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಕ್ಷ್ಮಿಗುಡ್ಡೆಯಲ್ಲಿರುವ ಶ್ರೀ ಧರ್ ಅವರ ಅತ್ತೆ ಕಮಲಾ ಅವರು ಎರಡು ದಿನಗಳ ಹಿಂದೆ ಮಗಳ ಮನೆಗೆ ಬಂದಿದ್ದರು. ಗುರುವಾರ ಮಧ್ಯಾಹ್ನ ವೇಳೆ ಮನೆ ಸಮೀಪದ ಕಾಡಿಗೆ ಕಟ್ಟಿಗೆಗೆಂದು ಶ್ರೀಧರ್ ಅವರ ತಾಯಿ ಜಾನಕಿ ಹೊರಟಿದ್ದರು. ಕಮಲಾ ಕೂಡ ಅವರ ಜತೆಗೆ ತೆರಳಿದ್ದರು. ಈ ವೇಳೆ ಕಟ್ಟಿಗೆಗಾಗಿ ಹುಡುಕಾಡುತ್ತಿದ್ದಾಗ ಹೆಜ್ಜೇನಿನ ಹಿಂಡು ಕಮಲಾ ಅವರ ಮೇಲೆ ದಾಳಿ ನಡೆಸಿದೆ.
ಅವರ ಬೊಬ್ಬೆ ಕೇಳಿ ಸ್ವಲ್ಪ ದೂರದಲ್ಲಿದ್ದ ಜಾನಕಿ ಅವರು ಓಡಿ ಬಂದು ರಕ್ಷಿಸಲು ಮುಂದಾಗಿದ್ದರು. ಆದರೆ ಅವರ ಮೇಲೂ ಹೆಜ್ಜೇನು ದಾಳಿ ನಡೆಸಿತ್ತು. ಇಬ್ಬರ ಕೂಗು ಕೇಳಿ ಶ್ರೀ ಧರ್ ಮತ್ತು ಲೀಲಾವತಿ ದಂಪತಿ ಸ್ಥಳಕ್ಕೆ ಧಾವಿಸಿದ್ದು, ಈ ಸಂದರ್ಭದಲ್ಲಿ ದಂಪತಿ ಮೇಲೂ ಹೆಜ್ಜೇನು ದಾಳಿ ನಡೆಸಿದೆ.
ಶ್ರೀಧರ್ ಗಂಭೀರ ಗಾಯಗೊಂಡಿದ್ದ ಕಮಲಾರನ್ನು ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಶ್ರೀಧರ್ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೆ, ಜಾನಕಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







