ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ
ರಣಜಿ ಟ್ರೋಫಿ: ಪವನ್ ಸಮರ್ಥ್ ಅರ್ಧಶತಕ

ಮೊಹಾಲಿ, ಡಿ.8: ಆರ್.ಸಮರ್ಥ್ ಹಾಗೂ ಪವನ್ ದೇಶಪಾಂಡೆ ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ರಣಜಿ ಟ್ರೋಫಿಯ 9ನೆ ಹಾಗೂ ಅಂತಿಮ ಸುತ್ತಿನ ಪಂದ್ಯದ ಎರಡನೆ ದಿನವಾದ ಗುರುವಾರ ಮಹಾರಾಷ್ಟ್ರದ ಮೊದಲ ಇನಿಂಗ್ಸ್ 163 ರನ್‌ಗೆ ಉತ್ತರವಾಗಿ ಕರ್ನಾಟಕ ದಿನದಾಟದಂತ್ಯಕ್ಕೆ 101 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 313 ರನ್ ಕಲೆಹಾಕಿದೆ. ಒಟ್ಟು 150 ರನ್ ಮುನ್ನಡೆಯಲ್ಲಿದೆ. ನಾಯಕ ವಿನಯಕುಮಾರ್(ಅಜೇಯ 36 ರನ್, 47 ಎಸೆತ, 6 ಬೌಂಡರಿ)ಹಾಗೂ ಎಸ್.ಅರವಿಂದ್(ಅಜೇಯ 1) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮಹಾರಾಷ್ಟ್ರದ ಪರ ಅನುಪಮ್ ಸಕ್ಲೇಚಾ(3-69) ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ದಾಧೆ(2-80) ಹಾಗೂ ಸೈಯದ್(2-42) ತಲಾ ಎರಡು ವಿಕೆಟ್ ಪಡೆದಿದ್ದಾರೆ.
1 ವಿಕೆಟ್‌ನಷ್ಟಕ್ಕೆ 67 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಸಮರ್ಥ್(64 ರನ್, 120 ಎಸೆತ, 8 ಬೌಂಡರಿ) ಹಾಗೂ ಅಬ್ಬಾಸ್(41 ರನ್, 95 ಎಸೆತ, 5 ಬೌಂಡರಿ) 2ನೆ ವಿಕೆಟ್‌ಗೆ ಬರೋಬ್ಬರಿ 100 ರನ್ ಕಲೆಹಾಕಿತು. ಆದರೆ ಈ ಇಬ್ಬರು ಆಟಗಾರರು ಬೆನ್ನುಬೆನ್ನಿಗೆ ಔಟಾದರು.
ಆಗ 4ನೆ ವಿಕೆಟ್‌ಗೆ 80 ರನ್ ಸೇರಿಸಿದ ಪವನ್ ದೇಶಪಾಂಡೆ(70 ರನ್, 139 ಎಸೆತ, 11 ಬೌಂಡರಿ) ಹಾಗೂ ಸ್ಟುವರ್ಟ್ ಬಿನ್ನಿ(46 ರನ್, 64 ಎಸೆತ,7 ಬೌಂಡರಿ) ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾದರು. ಪವನ್ 70 ರನ್ ಗಳಿಸಿ ತಂಡದ ಪರ ಸರ್ವಾಧಿಕ ಸ್ಕೋರ್ ದಾಖಲಿಸಿದರು.
ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅಂತಿಮ ಕ್ಷಣದಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಕಾರಣ ಪಾಂಡೆ ಬದಲಿಗೆ ಡೇವಿಡ್ ಮಥಾಯಿಸ್(6) ಆಡಿದ್ದರು. ಆರಂಭದಲ್ಲಿ ಪಾಂಡೆ ಬದಲಿ ಆಟಗಾರನನ್ನು ಕಣಕ್ಕಿಳಿಸುವುದನ್ನು ವಿರೋಧಿಸಿದ್ದ ಮಹಾರಾಷ್ಟ್ರ ಆನಂತರ ಸಮ್ಮತಿ ವ್ಯಕ್ತಪಡಿಸಿತ್ತು.
ಸಂಕ್ಷಿಪ್ತ ಸ್ಕೋರ್
ಮಹಾರಾಷ್ಟ್ರ ಮೊದಲ ಇನಿಂಗ್ಸ್: 163
ಕರ್ನಾಟಕ ಮೊದಲ ಇನಿಂಗ್ಸ್: 101 ಓವರ್‌ಗಳಲ್ಲಿ 313/9
(ಪವನ್ ದೇಶಪಾಂಡೆ 70, ಸಮರ್ಥ್ 64, ಬಿನ್ನಿ 46, ಅಬ್ಬಾಸ್ 41, ವಿನಯ್‌ಕುಮಾರ್ ಅಜೇಯ 36, ಸಂಕ್ಲೇಚಾ 3-69, ಸೈಯದ್ 2-46)
77 ವರ್ಷಗಳ ಹಳೆಯ ದಾಖಲೆ ಮುರಿದ ‘ದ್ವಿಶತಕ ವೀರ’ ಶ್ರೀವಾಸ್ತವ
ಹೊಸದಿಲ್ಲಿ, ಡಿ.8: ವೃದ್ದಿಮಾನ್ ಸಹಾ ನೆರಳಿನಿಂದ ಹೊರಬಂದ ಶ್ರೀವಾಸ್ತವ ಗೋಸ್ವಾಮಿ ಜೀವನಶ್ರೇಷ್ಠ 225 ರನ್ ಗಳಿಸಿದರು. ಗೋಸ್ವಾಮಿ ಸಾಹಸದ ನೆರವಿನಿಂದ ಬಂಗಾಳ ತಂಡ ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಎ ಗುಂಪಿನ 2ನೆ ದಿನದಾಟದಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 475 ರನ್ ಗಳಿಸಿದೆ.
11ನೆ ಕ್ರಮಾಂಕದ ಆಟಗಾರ ಸಯಾನ್ ಘೋಷ್(ಅಜೇಯ 20) ಅವರೊಂದಿಗೆ 10ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 119ರನ್ ಗಳಿಸಿದ ಶ್ರೀವಾಸ್ತವ 77 ವರ್ಷಗಳ ಹಳೆಯ ದಾಖಲೆಯೊಂದನ್ನು ಅಳಿಸಿಹಾಕಿದರು. 1938-39ರ ರಣಜಿ ಋತುವಿನಲ್ಲಿ ಮದ್ರಾಸ್ ತಂಡದ ವಿರುದ್ಧ ಬಂಗಾಳದ ಬಿ. ಮಾಲ್ಕಂ ಹಾಗೂ ಟಿಎಸ್ ಭಟ್ಟಾಚಾರ್ಯ 115 ರನ್ ಜೊತೆಯಾಟ ನಡೆಸಿದ್ದರು.
2ನೆ ದಿನದಾಟದಲ್ಲಿ ಬ್ಯಾಟಿಂಗ್‌ನ ಮೂಲಕ ಮಿಂಚಿದ ಗೋಸ್ವಾಮಿ 323 ಎಸೆತಗಳಲ್ಲಿ 25 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದಾರೆ.
ಬಂಗಾಳದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಬಂಗಾಲ 207 ರನ್‌ಗೆ 7 ವಿಕೆಟ್ ಕಳೆದುಕೊಂಡ ಬಳಿಕ ಕೊನೆಯ ಮೂವರು ಆಟಗಾರರು 268 ರನ್ ಕಲೆ ಹಾಕಿ ತಂಡ ಉತ್ತಮ ಸ್ಕೋರ್ ಗಳಿಸಲು ನೆರವಾದರು.







