ರೂರ್ಕೆಲಾದ ಮತ್ತೊಂದು ಹಾಕಿ ಪ್ರತಿಭೆ ನೀಲಮ್
.jpg)
ಮುಂಬೈ, ಡಿ.8: ಭಾರತ ಹಾಕಿಯ ರಾಜಧಾನಿ ರೂರ್ಕೆಲಾ. ಈ ನಗರದಿಂದ ಹಲವು ಹಾಕಿ ಆಟಗಾರರು ಮೂಡಿ ಬಂದಿದ್ದಾರೆ. ಎಲ್ಲರ ಸಾಧನೆಯ ಹಿಂದೆಯೂ ಒಂದೊಂದು ಕತೆಯಿದೆ. ಕಠಿಣ ಶ್ರಮ ಹಾಗೂ ಬಡತನ....ಛಲ ಹಾಗೂ ಬದ್ಧತೆಯ ಕತೆ ಎಲ್ಲರ ಬಾಳ್ವೆಯಲ್ಲೂ ಹಾಸು ಹೊಕ್ಕಾಗಿದೆ. ದಕ್ಷಿಣ ಕೇಂದ್ರ ರೈಲ್ವೆ ಸಿಕಂದರ್‌ಬಾದ್(ಎಸ್‌ಸಿಆರ್)ಡಿಫೆಂಡರ್ ಸಂಜೀಪ್ ನೀಲಮ್ ಜೀವನ ಕತೆಯೂ ಇದಕ್ಕಿಂತ ಭಿನ್ನವೇನಲ್ಲ.
ಬಡ ಕುಟುಂಬದಲ್ಲಿ ಜನಿಸಿದ ನೀಲಮ್ ಬುಧವಾರ ಮುಂಬೈ ಹಾಕಿ ಸಂಸ್ಥೆಯ ಮಹೇಂದ್ರ ಸ್ಟೇಡಿಯಂನಲ್ಲಿ ನಡೆದ ಬಾಂಬೆ ಗೋಲ್ಡ್ ಕಪ್ ಹಾಕಿ ಟೂರ್ನಿಯಲ್ಲಿ ಎರಡು ಗೋಲು ಬಾರಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು. ನೀಲಮ್ ಪ್ರಯತ್ನದ ಫಲವಾಗಿ ಸಿಕಂದರಾಬಾದ್ ತಂಡ ಪಂಜಾಬ್ ವಿರುದ್ಧ ಫೈನಲ್‌ನಲ್ಲಿ 4-2 ಅಂತರದಿಂದ ಜಯ ಸಾಧಿಸಿತ್ತು.
ಹಾಕಿ ಕ್ರೀಡೆ ರೂರ್ಕೆಲಾದಲ್ಲಿ ತುಂಬಾ ಜನಪ್ರಿಯವಾಗಿದೆ. ಈ ನಗರ ಹಲವು ಯುವ ಹಾಕಿ ಆಟಗಾರರನ್ನು ಕೊಡುಗೆಯಾಗಿ ನೀಡಿದೆ. ನೀಲಮ್ ಆಗಾಗ ಫುಟ್ಬಾಲ್ ಪಂದ್ಯವನ್ನು ಆಡುತ್ತಾರೆ. ಆದರೆ, ಅವರ ಕೈ ಹಿಡಿದಿರುವುದು ಹಾಕಿ ಕ್ರೀಡೆ. ಭಾರತದ ಮಾಜಿ ನಾಯಕ ಬೀರೇಂದ್ರ ಲಾಕ್ರ ಸಹಿತ ಹಲವು ಹಿರಿಯ ಕೋಚ್‌ರಿಂದ ನೀಲಮ್ ಸಾಕಷ್ಟು ಪಳಗಿದ್ದಾರೆ. ಶೀಘ್ರವೇ ಸಬ್ ಜೂನಿಯರ್ ಶಿಬಿರದಲ್ಲಿ ನೀಲಮ್ ಸ್ಥಾನ ಪಡೆಯಲಿದ್ದಾರೆ. ಡಿಫೆಂಡರ್ ಆಗಿ ಅವರ ಸಾಮರ್ಥ್ಯ ಎಲ್ಲರ ಗಮನ ಸೆಳೆದಿದೆ. ನೀಲಮ್‌ಗೆ ದೇಶದಲ್ಲಿ ಪ್ರತಿಷ್ಠಿತ ಕ್ಲಬ್‌ಗಳಿಂದ ಆಫರ್‌ಗಳು ಬಂದಿವೆ. ಆದರೆ, ಸ್ಪೋರ್ಟ್ಸ್ ಹಾಸ್ಟೆಲ್‌ನ ನಿಯಮದ ಪ್ರಕಾರ ಅವರು ಹೊರಗಿನ ಕ್ಲಬ್‌ನಲ್ಲಿ ಆಡುವಂತಿಲ್ಲ. ನೀಲಮ್ ಎಸ್‌ಸಿಆರ್‌ನಲ್ಲಿ ಉದ್ಯೋಗದಲ್ಲಿರುವ ಕಾರಣ ಮುಂಬೈನಲ್ಲಿ ಆಡುವ ಅವಕಾಶ ಪಡೆದಿದ್ದರು.
‘‘ನಾನು ಇದೇ ಮೊದಲ ಬಾರಿ ಅಖಿಲ ಭಾರತ ಟೂರ್ನಮೆಂಟ್‌ನಲ್ಲಿ ಆಡಿದ್ದೇನೆ. ಕ್ರೀಡಾ ಹಾಸ್ಟೆಲ್‌ನ ಅಧಿಕಾರಿಗಳು ಹಾಗೂ ಕೋಚ್‌ಗಳು ನನಗೆ ಅಲ್ಲಿ ಆಡಲು ಅವಕಾಶ ಕಲ್ಪಿಸಿದ್ದರು. ಮುಂದಿನ ದಿನಗಳಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿರುವೆ’’ ಎಂದು 18ರ ಪ್ರಾಯದ ನೀಲಮ್ ಹೇಳಿದ್ದಾರೆ.







