ಇದೇ ಮೊದಲ ಬಾರಿ ತವರು ನೆಲದಲ್ಲಿ ಮುಂಬೈ ಕ್ರಿಕೆಟಿಗರಿಗೆ ಅವಕಾಶವಿಲ್ಲ
ಮುಂಬೈ, ಡಿ.8: ಭಾರತ ಕ್ರಿಕೆಟ್ ತಂಡ 1933ರಲ್ಲಿ ಮುಂಬೈನಲ್ಲಿ ಮೊತ್ತ ಮೊದಲ ಟೆಸ್ಟ್ ಆಡಿದ ಬಳಿಕ ಇದೇ ಮೊದಲ ಬಾರಿ ಮುಂಬೈ ಮೂಲದ ಆಟಗಾರರು ಟೆಸ್ಟ್ ಪಂದ್ಯದ ಅಂತಿಮ 11ರ ಬಳಗದಿಂದ ಹೊರಗುಳಿದಿದ್ದಾರೆ.
ದೇಶದ ಕ್ರಿಕೆಟ್‌ನ ‘ನರ್ಸರಿ’ ಎಂದೇ ಕರೆಯಲ್ಪಡುವ ಮುಂಬೈಮಹಾನಗರದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ನಾಲ್ಕನೆ ಟೆಸ್ಟ್ ಪಂದ್ಯಕ್ಕಾಗಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ತನ್ನ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಠಾಕೂರ್‌ಗೆ ಅಂತಿಮ 11ರಲ್ಲಿ ಸ್ಥಾನ ನೀಡಲಾಗಿಲ್ಲ.
1933ರಲ್ಲಿ ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನಾ ಮೊದಲ ಟೆಸ್ಟ್‌ನ ಆತಿಥ್ಯವಹಿಸಿತ್ತು. ಇದು ದೇಶದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವೂ ಹೌದು. ಮುಂಬೈ ಆಟಗಾರರಿಲ್ಲದೆ ಭಾರತ ತಂಡವಿರುತ್ತಿರಲಿಲ್ಲ. ಆ ನಂತರ ಮುಂಬೈನಲ್ಲಿ ಆಡಲಾದ ಎಲ್ಲ ಟೆಸ್ಟ್ ಪಂದ್ಯಗಳ ಆಡುವ 11ರ ಬಳಗದಲ್ಲಿ ಮುಂಬೈನ ಆಟಗಾರರು ಸ್ಥಾನ ಪಡೆದಿದ್ದರು.
ಮುಂಬೈ ಆಟಗಾರ ಅಜಿಂಕ್ಯ ರಹಾನೆ ಬುಧವಾರ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಕೈಬೆರಳಿಗೆ ಗಾಯವಾಗಿ ಕೊನೆಯ ಕ್ಷಣದಲ್ಲಿ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು. ಶಾರ್ದೂಲ್ ಠಾಕೂರ್ ಅವರು ಗಾಯಾಳು ಮುಹಮ್ಮದ್ ಶಮಿ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದರು. ಈ ಹಿಂದೆ ಭಾರತದ ಆಡುವ 11ರ ಬಳಗದಲ್ಲಿ ಮುಂಬೈನ ಆರರಿಂದ ಏಳು ಆಟಗಾರರು ಸ್ಥಾನ ಪಡೆದಿದ್ದರು. ಭಾರತ-ಇಂಗ್ಲೆಂಡ್ ತಂಡದ ನಡುವಿನ ನಾಲ್ಕನೆ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 25ನೆ ಟೆಸ್ಟ್ ಪಂದ್ಯವಾಗಿದೆ. 1974-75ರಲ್ಲಿ ಮೊದಲ ಪಂದ್ಯ ಇಲ್ಲಿ ನಡೆದಿತ್ತು.







