ಪರ್ಸೇಕರ್ ವಜಾಗೊಂಡರೆ ಮಾತ್ರ ಬಿಜೆಪಿ ಜೊತೆ ಮೈತ್ರಿ ಮುಂದುವರಿಕೆ: ಎಂಜಿಪಿ
ಪಣಜಿ,ಡಿ.8: ಗೋವಾ ಮುಖ್ಯಮಂತ್ರಿ ಲಕ್ಮೀಕಾಂತ ಪರ್ಸೇಕರ್ ಅವರು ರಾಜ್ಯವನ್ನು ಅಧೋಗತಿಗೆ ತಳ್ಳಿದ್ದಾರೆ ಎಂದು ಇಂದಿಲ್ಲಿ ಆಪಾದಿಸಿದ ಆಡಳಿತ ಮೈತ್ರಿಕೂಟದ ಪಾಲುದಾರನಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು (ಎಂಜಿಪಿ), ಅವರನ್ನು ಹುದ್ದೆಯಿಂದ ವಜಾಗೊಳಿಸಿದರೆ ಮಾತ್ರ ಬಿಜೆಪಿಯೊಂದಿಗೆ ತನ್ನ ಮೈತ್ರಿಯು ಮುಂದುವರಿಯುತ್ತದೆ ಎಂದು ಹೇಳಿದೆ.
ಎಂಜಿಪಿಯ ನಿಲುವು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯೊಂದಿಗೆ ಅದರ ಮೈತ್ರಿ ಕುರಿತಂತೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ.
ಮನೋಹರ ಪಾರಿಕ್ಕರ್ ಅವರನ್ನು ಬಿಜೆಪಿಯ ನಾಯಕರೆಂದು ಪರಿಗಣಿಸಿ 2012ರ ಚುನಾವಣೆ ಸಂದರ್ಭ ನಾವು ಮೈತ್ರಿಕೂಟವನ್ನು ರಚಿಸಿಕೊಂಡಿದ್ದೆವು. ಆದರೆ ಪಾರಿಕ್ಕರ್ ಕೇಂದ್ರದಲ್ಲಿ ರಕ್ಷಣಾ ಸಚಿವರಾದ ಬಳಿಕ ಕಳೆದ ಎರಡೂವರೆ ವರ್ಷಗಳಿಂದ ಲಕ್ಷ್ಮೀಕಾಂತ ಪರ್ಸೇಕರ್ ನಾಯಕತ್ವ ವಹಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಅವರು ರಾಜ್ಯವನ್ನು ಹತ್ತು ವರ್ಷಗಳಷ್ಟು ಹಿಂದಕ್ಕೊಯ್ದಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿರುವುದು ನಮಗೆ ಇಷ್ಟವಿಲ್ಲ ಎಂದು ಎಂಜಿಪಿ ಅಧ್ಯಕ್ಷ ದೀಪಕ್ ಧಾವಳಿಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಮತ್ತು ಎಂಜಿಪಿ 2012ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಿದ್ದವು. ಬಿಜೆಪಿ 21 ಸ್ಥಾನಗಳನ್ನು ಗೆದ್ದಿದ್ದರೆ, ಎಂಜಿಪಿ ಮೂರು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿತ್ತು. ಧಾವಳಿಕರ್ ಮತ್ತು ಅವರ ಹಿರಿಯ ಸೋದರ ಸುದಿನ್ ಪರ್ಸೇಕರ್ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಪರ್ಸೇಕರ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಎಂಜಿಪಿಯು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಧಾವಳಿಕರ್ ಹೇಳಿದರು.
ಗೋವಾವನ್ನು ನಗದುರಹಿತ ರಾಜ್ಯವನ್ನಾಗಿಸಲು ಸಾಧ್ಯವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಅವರು, ಗೋವಾ ಈಗಾಗಲೇ ನಗದುರಹಿತ ರಾಜ್ಯವಾಗಿದೆ. ಸರಕಾರದ ಬಳಿ ಹಣವೆಲ್ಲಿದೆ? ನಾವೀಗಾಗಲೇ ನಗದುರಹಿತರಾಗಿದ್ದೇವೆ ಎಂದು ವ್ಯಂಗ್ಯವಾಡಿದರು.





