ಪರಿಸ್ಥಿತಿ ಸುಧಾರಿಸದಿದ್ದರೆ ಪ್ರತಿಭಟನೆ ತೀವ್ರ
ನೋಟು ಅಮಾನ್ಯ : ಶಿವಸೇನೆ ಎಚ್ಚರಿಕೆ
ಹೊಸದಿಲ್ಲಿ, ಡಿ.8: ನೋಟು ಅಮಾನ್ಯಗೊಳಿಸಿದ ಬಳಿಕ ಉದ್ಭವಿಸಿದ ಗೊಂದಲದ ಪರಿಸ್ಥಿತಿ ಡಿ.30ರ ಬಳಿಕವೂ ಸುಧಾರಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಡಿ.30ರ ವೇಳೆಗೆ ದೇಶದಲ್ಲಿ ಸಹಜ ಸ್ಥಿತಿ ನೆಲೆಸಲಿದೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ನೋಟು ಅಮಾನ್ಯಗೊಳಿಸಿದ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಕೇಂದ್ರ ಸರಕಾರ ಪರಿಹಾರ ನೀಡಬೇಕೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿಯ ಬೇಡಿಕೆಗೆ ಠಾಕ್ರೆ ಸಹಮತ ವ್ಯಕ್ತಪಡಿಸಿದರು. ಶಿವಸೇನೆಯು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಒಕ್ಕೂಟದ ಎರಡನೆ ದೊಡ್ಡ ಪಕ್ಷವಾಗಿದೆ.
ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದಾಗ ನಾನು ಸ್ವಾಗತಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬುದು ನನ್ನ ನಿಲುವಾಗಿತ್ತು. ಕೇಂದ್ರ ಸರಕಾರ ನೀಡಿದ್ದ 50 ದಿನಗಳ ವಾಯಿದೆಯಲ್ಲಿ 30 ದಿನ ಕಳೆದಿದೆ. ಆದರೆ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ವರದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. 50 ದಿನದ ಗಡುವು ಮುಗಿದ ಬಳಿಕ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ, ‘ಅಚ್ಛೇದಿನ್’ ಬರಬಹುದು. ಗಡುವು ಮುಗಿಯುವ ವರೆಗೆ ಕಾಯೋಣ. 20 ದಿನಗಳ ಬಳಿಕ ನಮ್ಮ ನಿಲುವಿನ ಬಗ್ಗೆ ತಿಳಿಸುತ್ತೇವೆ ಎಂದುತ್ತರಿಸಿದರು.
ಈ ಮೊದಲು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಗೆ ಕೈಜೋಡಿಸಿದ್ದ ಶಿವಸೇನೆ, ಆ ಬಳಿಕ ಮೃದುಧೋರಣೆ ತಳೆದಿದೆಯೇ ಎಂಬ ಪ್ರಶ್ನೆಗೆ ಠಾಕ್ರೆ ನಕಾರಾತ್ಮಕವಾಗಿ ಉತ್ತರಿಸಿದರು. ಲೋಕಸಭೆಯಲ್ಲಿ ನೋಟು ಅಮಾನ್ಯ ನಿರ್ಧಾರದ ಕುರಿತಾದ ಚರ್ಚೆಯಲ್ಲಿ ಧ್ವನಿಮತದ ಸಂದರ್ಭ ಬಂದರೆ ಶಿವಸೇನೆ ಯಾರ ಪರ ನಿಲ್ಲಲಿದೆ ಎಂಬ ಪ್ರಶ್ನೆಗೆ , ನಾವು ಜನರ ಪರ ನಿಲ್ಲಲಿದ್ದೇವೆ ಎಂದಷ್ಟೇ ಉತ್ತರಿಸಿದರು. ಸಂಸತ್ ಕಲಾಪಕ್ಕೆ ಪದೇ ಪದೇ ವಿಘ್ನವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಠಾಕ್ರೆ, ಇದು ದುರದೃಷ್ಟಕರ. ಈ ಬಗ್ಗೆ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಮಾಡಿರುವ ಟಿಪ್ಪಣಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.







