ರೆಡ್ಡಿ ಪುತ್ರಿಯ ಮದುವೆಗೆ ಕಪ್ಪು ಹಣ: ಗಂಭೀರ ತನಿಖೆ ಅಗತ್ಯ

ನೋಟು ನಿಷೇಧ ಜಾರಿಗೊಂಡ ದಿನದಿಂದ, ದೇಶಕ್ಕೆ ದೇಶವೇ ಒಂದು ವಿಕಟ ನಾಟಕಕ್ಕೆ ಸಾಕ್ಷಿಯಾಗಿದೆ. ಕಪ್ಪು ಹಣ ಯಾರೆಲ್ಲ ಹೊಂದಿದ್ದಾರೆಂದು ದೇಶ ಅನುಮಾನಿಸುತ್ತಿದೆಯೋ ಅವರೆಲ್ಲರೂ ನೋಟು ನಿಷೇಧವನ್ನು ಸ್ವಾಗತಿಸುತ್ತಿದ್ದಾರೆ. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು, ಅಂಬಾನಿಯಂತಹ ಬೃಹತ್ ಉದ್ಯಮಿಗಳು, ಕಪ್ಪು ಕುಳಗಳೆಲ್ಲ ಪ್ರಧಾನಿಯ ಕ್ರಮವನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಈ ದೇಶದ ಎಲ್ಲ ಬ್ಯಾಂಕುಗಳ ಮುಂದೆ ಬಡವರು, ಮಧ್ಯಮವರ್ಗದ ಜನರು ಕ್ಯೂ ನಿಲ್ಲತೊಡಗಿದರು. ಎಲ್ಲೂ ಈ ದೇಶದಲ್ಲಿರುವ ಬೃಹತ್ ಉದ್ಯಮಿಗಳು, ಅಧಿಕಾರಿಗಳು ಕ್ಯೂ ನಿಂತಿರುವುದನ್ನು ಯಾರೂ ನೋಡಿಲ್ಲ. ಅಂದರೆ ಅವರ ಬಳಿ ಕಪ್ಪು ಹಣವೇ ಇಲ್ಲ ಎಂದಾಯಿತು. ಇದೇ ಸಂದರ್ಭದಲ್ಲಿ ನೋಟು ನಿಷೇಧದಿಂದ ಕಪ್ಪು ಹಣ ನಾಶವಾಯಿತು ಎನ್ನುವಾಗಲೇ, ಕೆಲವು ಅಧಿಕಾರಿಗಳು, ರಾಜಕಾರಣಿಗಳ ಬಳಿ ಹಲವು ಕೋಟಿಗಳ ಲೆಕ್ಕದಲ್ಲಿ ಹೊಸ ನೋಟುಗಳು ಪತ್ತೆಯಾಗುತ್ತಿವೆ. ಅರೆ! ಇವರು ಯಾವ ಬ್ಯಾಂಕಿನಲ್ಲೂ ಕ್ಯೂ ನಿಂತಿಲ್ಲ. ಕ್ಯೂ ನಿಂತರೂ ಇಷ್ಟು ಪ್ರಮಾಣದಲ್ಲಿ ಹಣ ಒದಗಿಸಲು ಬ್ಯಾಂಕುಗಳಿಗೆ ಯಾವ ಅನುಮತಿಯೂ ಇಲ್ಲ. ಹಾಗೆಂದು, ಇವರ ಬಳಿ ಇರುವುದು ನಕಲಿ ನೋಟಂತೂ ಅಲ್ಲ. ಹೀಗಿರುವಾಗ, ಇವರ ಬಳಿ ಕೇವಲ ಒಂದೆರಡು ವಾರದಲ್ಲಿ ಇಷ್ಟು ಕೋಟಿ ಹೊಸ ನೋಟುಗಳು ಹೇಗೆ ಬಂದವು? ನೋಟು ನಿಷೇಧದ ಬಳಿಕ ಸುಮಾರು 60ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಇವರಲ್ಲಿ ಒಬ್ಬನೇ ಒಬ್ಬ ಬೃಹತ್ ಶ್ರೀಮಂತನ ಹೆಸರಿಲ್ಲ. ಇತ್ತೀಚೆಗಷ್ಟೇ ಬ್ಯಾಂಕ್‌ನಲ್ಲಿ ಹಣ ಬದಲಾವಣೆ ಸಾಧ್ಯವಾಗದೆ ಮಹಿಳೆಯೊಬ್ಬರು ಮನೆಯೊಳಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯೂ ಕಪ್ಪುಹಣ ಹೊಂದಿದ ಶ್ರೀಮಂತಳಾಗಿರಲಿಲ್ಲ. ಓರ್ವ ನಿವೃತ್ತ ಸೈನಿಕ ತನ್ನ ಮಗಳ ಮದುವೆಗೆ ಬ್ಯಾಂಕ್ ಹಣ ನೀಡದ ಕೊರಗಿನಿಂದ ಮೃತರಾದರು. ಇದೇ ಸಂದರ್ಭದಲ್ಲಿ ಈ ದೇಶದಲ್ಲಿ ಎರಡು ಮದುವೆಗಳು ಕಣ್ಣು ಕುಕ್ಕುವಂತೆ ನಡೆದವು. ಅದರಲ್ಲಿ ಒಂದು ರೆಡ್ಡಿಯ ಮಗಳ ಮದುವೆಯಾದರೆ, ಇನ್ನೊಂದು ಗಡ್ಕರಿಯ ಮಗಳ ಮದುವೆ. ಎಲ್ಲ ರಾಜಕಾರಣಿಗಳೂ ಈ ಅದ್ದೂರಿ ಮದುವೆಯಲ್ಲಿ ಯಾವ ಸಂಕೋಚವೂ ಇಲ್ಲದೆ ಭಾಗವಹಿಸಿದರು. ಆದರೆ ಈ ಸಂದರ್ಭದಲ್ಲಿ ಇಷ್ಟು ಅದ್ದೂರಿತನದಿಂದ ಮದುವೆ ನಡೆಸಲು ಅವರಿಗೆ ಹೊಸ ನೋಟುಗಳು ಹೇಗೆ, ಎಲ್ಲಿ ದೊರಕಿದವು ಎನ್ನುವುದು ಮಾಧ್ಯಮಗಳಲ್ಲಿ ಚರ್ಚೆಯೇ ಆಗಲಿಲ್ಲ. ಕಪ್ಪು ಹಣ ನಿಗೂಢವಾಗಿ ಹೊಸ ನೋಟುಗಳಾಗಿ ಬದಲಾಗುವುದರ ಹಿಂದೆ ಯಾರಿದ್ದಾರೆ? ಇಂತಹದೊಂದು ಪ್ರಶ್ನೆ ಇದೀಗ ರಾಜ್ಯದಲ್ಲೂ ಚರ್ಚೆಯ ರೂಪ ಪಡೆದಿದೆ.
ರೆಡ್ಡಿ ಪುತ್ರಿಯ ಮದುವೆಯಲ್ಲಿ ಕಪ್ಪು ಹಣ ಬಳಕೆಯ ಕುರಿತಂತೆ ಅನುಮಾನ, ಆರೋಪ, ಟೀಕೆ ಈ ಹಿಂದೆಯೇ ವ್ಯಕ್ತವಾಗಿದೆ. ಇಡೀ ದೇಶದ ಮೇಲೆ ನೋಟು ನಿಷೇಧದ ಕಾರ್ಮೋಡ ಕವಿದಿರುವ ಹೊತ್ತಿನಲ್ಲಿ ಐನೂರು ಕೋಟಿ ರೂಪಾಯಿಯಷ್ಟು ವೆಚ್ಚದಲ್ಲಿ ಜನಾರ್ದನ ರೆಡ್ಡಿಯವರು ತಮ್ಮ ಪುತ್ರಿಯ ಮದುವೆಯನ್ನು ನೆರವೇರಿಸಿರುವುದು ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ‘ತನ್ನದು ಕಪ್ಪು ಹಣವಲ್ಲ’ ಎಂದು ರೆಡ್ಡಿ ಅದೆಷ್ಟೇ ಜೋರಾಗಿ ಕೂಗಿ ಹೇಳಿದರೂ, ಅಲ್ಲಿ ಹರಿದಿದ್ದ ಹಣದ ಹೊಳೆ ಬೇರೆಯದನ್ನೇ ಹೇಳುತ್ತಿತ್ತು. ಮದುವೆಗೆ ಎರಡು ದಿನ ಮುಂಚೆಯೇ ಐಟಿ ಅಧಿಕಾರಿಗಳೇನಾದರೂ ರೆಡ್ಡಿ ನಿವಾಸಕ್ಕೆ ದಾಳಿ ನಡೆಸಿದ್ದಿದ್ದರೆ, ಬಹುಶಃ ವಾಸ್ತವ ಏನು ಎನ್ನುವುದು ಜನರಿಗೆ ತಿಳಿಯುತ್ತಿತ್ತೇನೋ. ಮದುವೆ ಮುಗಿಯುವವರೆಗೂ ಕಾದು, ಆ ಬಳಿಕ ದಾಳಿಯ ನಾಟಕವಾಡಿ, ರೆಡ್ಡಿಗೆ ಪರೋಕ್ಷ ಕ್ಲೀನ್ ಚಿಟ್ ಕೊಟ್ಟರು ಐಟಿ ಅಧಿಕಾರಿಗಳು. ರೆಡ್ಡಿಯನ್ನು ಐಟಿ ಅಧಿಕಾರಿಗಳಿಂದ ರಕ್ಷಿಸಿದವರು ಯಾರು? ಎನ್ನುವುದಕ್ಕೆ, ರೆಡ್ಡಿ ಮದುವೆಯ ಆಲ್ಬಮ್ ವೀಕ್ಷಿಸಿದರೆ ಸಾಕು. ಆ ಮದುವೆಯಲ್ಲಿ ಹಲ್ಲು ಕಿಸಿಯುತ್ತಾ ನಿಂತಿದ್ದ ರಾಜಕಾರಣಿಗಳೇ ಎಲ್ಲವನ್ನೂ ಹೇಳಿ ಬಿಡುತ್ತಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಿನಗಳು ಕಳೆದ ಬಳಿಕ, ಇದೀಗ ರೆಡ್ಡಿ ಮದುವೆ ಮನೆಯಲ್ಲಿ ಸೂತಕದ ವಾಸನೆಯೆದ್ದಿದೆ. ರೆಡ್ಡಿ ಪುತ್ರಿಯ ಅದ್ದೂರಿ ವಿವಾಹಕ್ಕೆ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಬಿಳಿ ಮಾಡಿಸಿಕೊಟ್ಟ ಬಗ್ಗೆ ಮಾಹಿತಿಯಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ ಅವರ ಕಾರು ಚಾಲಕ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ರೆಡ್ಡಿ ಮದುವೆಗೆ ಬಳಸಿರುವ ಹಣ ಕಪ್ಪೋ-ಬಿಳುಪೋ ಎನ್ನುವುದು ಚರ್ಚೆಗೀಡಾಗಿದೆ. ರೆಡ್ಡಿಯ ಕಪ್ಪು ಹಣವನ್ನು ಬಿಳಿಯಾಗಿಸಿದ್ದೇ ಭೀಮಾನಾಯ್ಕ ಎಂದು ಚಾಲಕ ಆರೋಪಿಸಿದ್ದಾರೆೆ. ಮತ್ತು ಇದೀಗ ಅಧಿಕಾರಿ ಭೀಮಾನಾಯ್ಕ ತಲೆ ಮರೆಸಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ರೆಡ್ಡಿ ಮತ್ತು ಶ್ರೀರಾಮುಲು ಹೆಸರು ಉಲ್ಲೇಖವಾಗಿರುವುದರಿಂದ ಚಾಲಕನ ಆತ್ಮಹತ್ಯೆ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. ಈ ಹಿಂದೆ, ಪೊಲೀಸ್ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಸಚಿವರೊಬ್ಬರ ಹೆಸರನ್ನು ಉಲ್ಲೇಖ ಮಾಡಿದ್ದನ್ನು ಆಕಾಶ ಭೂಮಿ ಮಾಡಿ ಅವರಿಂದ ರಾಜೀನಾಮೆ ಕೊಡಿಸಿದ್ದ ಬಿಜೆಪಿ ನಾಯಕರು, ರೆಡ್ಡಿಯ ಮೇಲಿರುವ ಆರೋಪದ ಕುರಿತಂತೆ ಇದೀಗ ತುಟಿ ಬಿಚ್ಚುತ್ತಿಲ್ಲ.
ಚಾಲಕ ತನ್ನ ಡೆತ್ ನೋಟಿನಲ್ಲಿ ಭೀಮಾನಾಯ್ಕ ಮಾಡಿರುವ ಅಕ್ರಮ ಹಣದ ಕುರಿತಂತೆ ವಿವರವಾಗಿ ಬರೆದಿದ್ದಾರೆ. ಅಧಿಕಾರಿ ಮತ್ತು ಚಾಲಕನ ನಡುವೆ ಮೇಲ್ನೋಟಕ್ಕೆ ಯಾವುದೋ ಭಿನ್ನಾಭಿಪ್ರಾಯ ಇದ್ದಂತೆ ಕಾಣುತ್ತಿದೆ. ಚಾಲಕನ ಮೂರು ತಿಂಗಳ ವೇತನವನ್ನು ತಡೆಹಿಡಿದಿದ್ದಾರೆ ಎನ್ನುವುದು ಆತ್ಮಹತ್ಯೆ ಪತ್ರದಲ್ಲಿ ಬಹಿರಂಗವಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಭೀಮಾನಾಯ್ಕನಿಗೂ ರೆಡ್ಡಿ ಸಹೋದರರಿಗೂ ಇರುವ ಸಂಬಂಧವನ್ನು ಪತ್ರದಲ್ಲಿ ನೇರವಾಗಿ ಹೇಳಿದ್ದಾರೆ. ರೆಡ್ಡಿಯ ಮದುವೆಗೆ ಕಪ್ಪು ಹಣವನ್ನು ಬಿಳಿ ಮಾಡಲು ಭೀಮಾನಾಯ್ಕ ಸಹಕರಿಸಿದ್ದಾರೆ ಎನ್ನುವುದನ್ನು ಅವರು ತಿಳಿಸಿದ್ದಾರೆ. ಆದರೆ ಅವರು ಆರೋಪಿಸಿದಾಕ್ಷಣ ಅದು ನಿಜವಾಗಬೇಕಾಗಿಲ್ಲ. ಆದರೆ ಒಂದು ಗಂಭೀರ ತನಿಖೆಗೆ ಅರ್ಹವಾದ ಪ್ರಕರಣವಂತೂ ಇದಾಗಿದೆ. ಮುಖ್ಯವಾಗಿ ಭೀಮಾನಾಯ್ಕನ ಸಮಸ್ತ ಹಣ, ಆಸ್ತಿಯ ಕುರಿತಂತೆ ತನಿಖೆ ನಡೆಯಬೇಕಾಗಿದೆ. ಅದರ ಮೂಲಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯಬೇಕು. ಇದರ ಜೊತೆಗೆ ರೆಡ್ಡಿಗೆ ಕಪ್ಪು-ಬಿಳಿ ವ್ಯವಹಾರದಲ್ಲಿ ಭೀಮಾನಾಯ್ಕ ವಹಿಸಿರುವ ಪಾತ್ರವೂ ಗಂಭೀರ ತನಿಖೆಗೊಳಪಡಬೇಕು. ವಿಪರ್ಯಾಸವೆಂದರೆ, ಇಂದು ರಾಜಕಾರಣಿಗಳ ಬಳಿ ಇರುವ ಕಪ್ಪು ಹಣಕ್ಕೆ ಅಧಿಕಾರಿಗಳೇ ತಲೆಹಿಡುಕರಾಗಿ ಕೆಲಸ ಮಾಡುತ್ತಿರುವುದು. ಇತ್ತೀಚೆಗಷ್ಟೇ ರಾಜ್ಯದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೆ ಹೊಸ ನೋಟುಗಳು ಪತ್ತೆಯಾದವು. ಅವರಿಗೆ ಈ ಹಣ ಎಲ್ಲಿಂದ ಬಂತು? ಯಾರಿಗೆ ಇದನ್ನು ತಲುಪಿಸುವ ಉದ್ದೇಶವನ್ನು ಹೊಂದಿದ್ದರು ಎನ್ನುವುದು ಪ್ರಾಮಾಣಿಕ ತನಿಖೆಯಿಂದಷ್ಟೇ ತಿಳಿಯಬಹುದು. ಆದರೆ ಆಳುವವರು ಮತ್ತು ಭ್ರಷ್ಟ ಅಧಿಕಾರಿಗಳು ಒಳಗೊಳಗೆ ಸಂಬಂಧವನ್ನು ಹೊಂದಿರುವುದರಿಂದ ಮತ್ತು ತನಿಖೆಗೆ ಆದೇಶಿಸುವವರು ಆಳುವವರೇ ಆಗಿರುವುದರಿಂದ ಹೆಚ್ಚಿನ ಪ್ರಕರಣಗಳು ಯಾವುದೇ ಗಂಬೀರ ತನಿಖೆ ನಡೆಯದೇ ಮುಚ್ಚಿ ಹೋಗುತ್ತಿವೆ. ಬಹುಶಃ ರೆಡ್ಡಿಯ ಕಪ್ಪು ಹಣದ ಕತೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
ನೋಟು ನಿಷೇಧಕ್ಕೆ ಒಂದೆಡೆ ಜನಸಾಮಾನ್ಯರು ನೇರವಾಗಿ ಬಲಿಯಾಗುತ್ತಿದ್ದರೆ, ಮಗದೊಂದೆಡೆ ಶ್ರೀಮಂತರ ಕಪ್ಪು ಹಣ ಬಿಳಿಯಾಗಿಸುವ ತಂತ್ರಗಳಿಗೆ ತಳಸ್ತರದ ಜನರು ಪರೋಕ್ಷ ಬಲಿಯಾಗುತ್ತಿದ್ದಾರೆ. ಅದೆಷ್ಟೋ ನಿಗೂಢ ನಾಪತ್ತೆ, ಸಾವು, ಆತ್ಮಹತ್ಯೆಗಳ ಹಿಂದೆ ನೋಟು ನಿಷೇಧದ ನೆರಳು ಬಿದ್ದಿದೆ. ನೋಟು ನಿಷೇಧದ ಬಳಿಕ ದೇಶ ಅತಿ ಹೆಚ್ಚು ಭ್ರಷ್ಟಗೊಂಡಿದೆ. ಕಂಡರಿಯದಷ್ಟು ಅಕ್ರಮಗಳು ನಡೆಯತೊಡಗಿವೆ. ಇದು ಈ ದೇಶವನ್ನು ಒಳ್ಳೆಯ ದಿನಗಳ ಕಡೆಗೆ ಮುನ್ನಡೆಸುತ್ತದೆ ಎಂದು ಊಹಿಸುವುದು ನಮ್ಮ ಮೂರ್ಖತನವಲ್ಲದೆ ಇನ್ನೇನೂ ಅಲ್ಲ.







