ಕಾವೇರಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ, ಡಿ.15ರಂದು ವಿಚಾರಣೆ :ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪು

ಹೊಸದಿಲ್ಲಿ, ಡಿ.9: ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ವಿರುದ್ಧ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಡಿ.15ರಂದು ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾಗಲಿದೆ.
ಮೂರು ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯ ವಿಚಾರಣೆ ಮಾಡಬಾರದೆಂದು ಕೇಂದ್ರ ಸರಕಾರ ವಾದಿಸಿತ್ತು. ಆದರೆ ಅರ್ಜಿಯ ವಿಚಾರಣೆ ಮಾಡಬೇಕೇ? ಅಥವಾ ಬೇಡವೆ ? ಎಂಬ ವಿಚಾರದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಜಸ್ಟೀಸ್ ದೀಪಕ್ ಮಿಶ್ರಾ, ಜಸ್ಟೀಸ್ ಅಮಿತ್ ರವ ರಾಯ್ ,ಜಸ್ಟೀಸ್ ಎಫ್ ಎಂ ಖಾನ್ ವಿಲ್ಕರ್ ಅವರನ್ನೊಳಗೊಂಡ ಮೂವರು ಸದಸ್ಯರ ವಿಭಾಗೀಯ ಪೀಠ ಇಂದು ತೀರ್ಪು ಪ್ರಕಟಿಸಿ ಮೂರು ರಾಜ್ಯಗಳು ಅಂತಿಮ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹವೆಂದು ಹೇಳಿದೆ.
ಇದೇ ವೇಳೆ ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಯಾವುದೇ ಬದಲಾವಣೆ ಮಾಡಿಲ್ಲ. ಈ ಆದೇಶವನ್ನು ಮುಂದುವರಿಸುವಂತೆ ಮಹತ್ವದ ತೀರ್ಪು ನೀಡಿದೆ.





