ಪ್ರವಾದಿ ಬದುಕಿನ ಸಂದೇಶಗಳು ಮನುಕುಲದ ಸಮಗ್ರ ಸುಧಾರಣೆಗೆ ಪೂರಕವಾಗಿದೆ: ಬೈತಾರ್ ಸಖಾಫಿ

ರಿಯಾದ್, ಡಿ.9: ಪ್ರವಾದಿ ಮುಹಮ್ಮದ್ (ಸ) ಈ ಜಗತ್ತಿಗೆ ನೀಡಿದ ಸಂದೇಶವು ಮನುಕುಲದ ಒಟ್ಟಾರೆ ಏಳಿಗೆಯನ್ನು ಬಯಸುವಂತದ್ದಾಗಿದ್ದು ಅಲ್ಲಿ ಸಮಸ್ತ ನಾಗರಿಕ ಜನಾಂಗದ ಸರ್ವತ್ರ ಸಮಸ್ಯೆಗಳಿಗೂ ಪರಿಹಾರವಿದೆ. ಮನೆ, ಮಠ, ಕುಟುಂಬ, ಸಂಸಾರ, ನೆರೆಕೆರೆ, ಸಮಾಜ, ಪರಿಸರ, ದೇಶ, ಹೀಗೆ ಬದುಕಿನುದ್ದಕ್ಕೂ ತಾನು ಬಾಂಧವ್ಯ ಬೆಳೆಸಿಕೊಳ್ಳಬೆಕಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಇಸ್ಲಾಮಿನ ಪ್ರವಾದಿಯು ಅತ್ಯಂತ ನಾಜೂಕಿನಿಂದ ನಿಭಾಯಿಯಿಸಿ ಜಗತ್ತಿನ ಮುಂದೆ ಆದರ್ಶ ಪುರುಷರಾಗಿಯೇ ಬಾಳಿದ್ದರು
ಓರ್ವ ತಬ್ಬಲಿಯಾಗಿ ಹುಟ್ಟಿದ ಅವರು ಮಾನವ ಬದುಕಿನಲ್ಲಿ ಅನಾಥ ಜನಾಂಗವೊಂದು ಎದುರಿಸಬೇಕಾಗಿ ಬರುವ ಸವಾಲುಗಳು, ಸಮಾಜದ ಕೆಟ್ಟ, ದೃಷ್ಟಿಕೋನ, ತುಳಿಯುವಿಕೆ, ಅನಾಥ ಪ್ರಜ್ಞೆ, ಪೇಲ್ಪಂಕ್ತಿಗೆ ಏರಬೇಕೆಂಬ ಬಯಕೆಗೆ ಅಡ್ಡಿಯಾಗುವ ಕಾರಣಗಳು, ಇತ್ಯಾದಿಗಳನ್ನು ಸ್ವತಃ ತಾನೇ ಅನುಭವಿಸಿಕೊಂಡು ಅವುಗಳಿಗೆಲ್ಲ ಪರಿಹಾರವನ್ನೂ ಒದಗಿಸುವ ಮೂಲಕ ಹುಟ್ಟಿನಲ್ಲೇ ಕಮರಿ ಹೋಗಬೇಕಾದ ಅನಾಥ ವರ್ಗವೊಂದರ ಆಸರೆಯಾಗಿ ಅವರು ಬಾಳಿದರು. ವಿಧವೆಯೊಬ್ಬಳನ್ನು ಮಗುವೆಯಾಗುವ ಮೂಲಕ ಅಂದಿನ ಅರಬ್ ನಾಗರಿಕತೆ, ಸಮಾಜದ ವಿಧವೆರಿಗೆ ಕಲ್ಪಿಸಿದ್ದ ಅಸ್ಪರ್ಶ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಗತ್ತಿಗೇ ಮಾದರಿಯಾಗುವ ಸಂದೇಶ ರವಾನಿಸಿದರು.
ಹೆಣ್ಣು ಸಂತತಿಯನ್ನು ಅಪಶಕುನವೆಂದೇ ಬಗೆಯುತ್ತಿದ್ದ ವರ್ಗವೊಂದನ್ನು ಅದೇ ಹೆಣ್ಣು ಮಾನವ ಬದುಕಿನ ಅವಿಭಾಜ್ಯ ಅಂಗವೆಂದು ಗುರುತಿಸಿಕೊಳ್ಳುವ ಹಂತಕ್ಕೆ ಅವರು ಬೆಳೆಸಿಬಿಟ್ಟರು. ಹೀಗೆ ಹೇಳುತ್ತಾ ಹೋದರೆ ಅವರ ಬದುಕಿನ ಪ್ರತಿಯೊಂದು ಏರಿಳಿತಗಳಲ್ಲೂ ನಾವು ಹೋರಾಟ ಹಾಗೂ ಕ್ರಾಂತಿಯ ಅಲೆಗಳನ್ನು ಗುರುತಿಸಿಕೊಳ್ಳಲು ಸಾಧ್ಯ ಎಂದು ಕೆಸಿಎಫ್ ಸೌದಿ ಕೇಂದ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ನುಡಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ತನ್ನ ಸದಸ್ಯರಿಗಾಗಿ ಕಳೆದ ಆರು ತಿಂಗಳ ಹಿಂದೆ ಕೊಲ್ಲಿಯಾದ್ಯಂತ ಆರಂಭಿಸಿದ ''ಅಸ್ಸುಫ್ಫಾ'' ಕಲಿಕಾ ತರಗತಿಯ ಮೊದಲ ಹಂತದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ದೇಶಾದ್ಯಂತ ಹಮ್ಮಿಕೊಂಡ ಕಾರ್ಯಕ್ರಮದ ಅಂಗವಾಗಿ ರಿಯಾದ್ ಝೋನಲ್ ಎರಡು ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಬತ್ತಾದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ರಿಯಾದ್ ಝೋನಲ್ ಸಾರ್ವಜನಿಕ ಸಂಪರ್ಕ ವಿಭಾಗದ ಸಂಚಾಲಕ ಮುುಸ್ತಫಾ ಸಆದಿ ಸೂರಿಕುಮೇರು ಉದ್ಘಾಟಿಸಿದರು. ಸಂಘಟನಾ ವಿಭಾಗದ ಚೆಯರ್ಮೇನ್ ಸಿದ್ದೀಕ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಬ್ಬಾಸ್ ಸಅದಿ ಕಿರಾಅತ್ ಪಠಿಸಿದರು, ಕಾರ್ಯದರ್ಶಿ ಫಾರೂಕ್ ಉಳ್ಳಾಲ್ ಆರಂಭದಲ್ಲಿ ಸ್ವಾಗತಿಸಿ ನ್ಯೂ ಸನಯ್ಯ ಸೆಕ್ಟರ್ ಕಾರ್ಯದರ್ಶಿ ಶಮೀರ್ ಉಡುಪಿ ಕೊನೆಯಲ್ಲಿ ವಂದಿಸಿದರು.
ರಬ್ವಾ ಸೆಕ್ಟರ್ ನ ಸಹಕಾರದೊಂದಿಗೆ ರಬ್ವಾದ ''ದಾರುಲ್ ಫಲಾಹ್'' ನಲ್ಲಿ ನಡೆದ ದ್ವಿತೀಯ ಕಾರ್ಯಕ್ರಮದಲ್ಲಿ ಇಸ್ಹಾಕ್ ಮದನಿ ಉರುವಾಲು ಪದವು ಅಧ್ಯಕ್ಷತೆ ವಹಿಸಿದರು. ಅಬ್ದುರ್ರಶೀದ್ ಮದನಿ ಉದ್ಘಾಟಿಸಿದರು. ಅಶ್ರಪ್ ಕಿಲ್ಲೂರು ವಿಷಯ ಮಂಡಿಸಿದರು.
ಬತ್ತಾ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ, ಗದೀಂ ಸನಯ್ಯ ಕೋಶಾಧಿಕಾರಿ ಇಸ್ಮಾಯೀಲ್ ಕಣ್ಣಂಗಾರ್, ಅಬ್ದುರ್ರಹ್ಮಾನ್ ಜೋಗಿಬೆಟ್ಟು ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಅಬ್ದುಲ್ಲತೀಫ್ ಅಶ್ರಫಿ ಪೆರುವಾಯಿ ಖಿರಾಅತ್ ಪಠಿಸಿದರು. ಅಶ್ರಫ್ ಮದನಿ ಮಡಂತ್ಯಾರು ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.







