ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಒದಗಿಸುವಂತೆ ರಾಜ್ ನಾಥ್ ಸಿಂಗ್ ಗೆ ಸಿದ್ದರಾಮಯ್ಯ ಮನವಿ
ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ

ಹೊಸದಿಲ್ಲಿ, ಡಿ.9: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಚರ್ಚಿಸಿದರು. ಬರ ಮತ್ತು ಮಳೆಯಿಂದಾಗಿ ಆಗಿರುವ ಬೆಳೆ ಹಾನಿ ಕುರಿತು ವಿವರ ನೀಡಿದರು. ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ಒದಗಿಸುವಂತೆ ಮನವಿ ಸಲ್ಲಿಸಿದರು.
ಬರ ಪರಿಸ್ಥಿತಿಯಿಂದಾಗಿ 17,193 ಕೋಟಿ ರೂ.ಗಳ ಹಾನಿ ಸಂಭವಿಸಿದೆ. ಬರ ಪರಿಹಾರ ಕಾಮಗಾರಿಗಳನ್ನು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೈಗೊಂಡಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿಯವರು ಕೇಂದ್ರ ಗೃಹ ಸಚಿವರಿಗೆ ವಿವರಿಸಿದರು.
139 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರಕಾರ ಈಗಾಗಲೇ ಘೋಷಿಸಿದೆ. ಪರಿಹಾರ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಈ ವರೆಗೆ 204.00 ಕೋಟಿ ರೂ.ಗಳನ್ನು 2016-17ನೇ ಸಾಲಿನಲ್ಲಿ ವೆಚ್ಚ ಮಾಡಿದೆ ಎಂದು ಹೇಳಿದರು. ಇದಲ್ಲದೆ, ವಿಶೇಷ ಅನುದಾನ ರೂಪದಲ್ಲಿ 967.76 ಕೋಟಿ ರೂ.ಗಳನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ರಾಜ್ಯ ಸರಕಾರದ ದಿಲ್ಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ ಉಪಸ್ಥಿತರಿದ್ದರು.







