ಪ್ರಧಾನಿ ಮೋದಿಗಾಗಿ ಹೊರ ಬಂತು `ಅದೃಷ್ಟದ ಕುರ್ಚಿ'
ಏನಿದರ ವಿಶೇಷತೆ ?

ಲಕ್ನೌ, ಡಿ.9: ಡಿಸೆಂಬರ್ 19ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ `ಅದೃಷ್ಟದ ಕುರ್ಚಿ'ಯನ್ನು ಬಿಜೆಪಿ ನೀಡಲಿದ್ದು ಕಾನ್ಪುರದಲ್ಲಿ ನಡೆಯಲಿರುವ ರ್ಯಾಲಿಯ ಸಂದರ್ಭ ಮೋದಿ ಈ ಕುರ್ಚಿಯಲ್ಲಿಯೇ ಕುಳಿತುಕೊಳ್ಳಲಿದ್ದಾರೆ.
ಇದಕ್ಕೆ ಕಾರಣವೂ ಇದೆ. 2014 ಲೋಕಸಭಾ ಚುನಾವಣೆಯ ಪ್ರಚಾರ ಆರಂಭದ ಸಮಯ ಮೋದಿ ತಮ್ಮ ಪ್ರಥಮ ವಿಜಯ್ ಶಂಖನಾದ್ ರ್ಯಾಲಿಯನ್ನು ಕಾನ್ಪುರದಲ್ಲಿ ಅಕ್ಟೋಬರ್ 19, 2013ರಂದು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭ ಮೋದಿ ಆ ಕುರ್ಚಿಯಲ್ಲಿಯೇ ಕುಳಿತಿದ್ದರು. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದಲ್ಲಿ ಮೋದಿ ಭಾಗವಹಿಸಿದ್ದ ಪ್ರಥಮ ಚುನಾವಣಾ ಪೂರ್ವ ಸಭೆ ಅದಾಗಿತ್ತು. ಮುಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಒಟ್ಟು 80 ಸೀಟುಗಳಲ್ಲಿ 71 ಸೀಟುಗಳಲ್ಲಿ ವಿಜಯ ಸಾಧಿಸಿತ್ತು.
ಕಾನ್ಪುರ ರ್ಯಾಲಿ ಸಂದರ್ಭ ಅಂದು ಮೋದಿ ಕುಳಿತುಕೊಂಡಿದ್ದ ಕುರ್ಚಿಯನ್ನು ಪಕ್ಷದ ನಾಯಕರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅದಕ್ಕೆಂದೇ ವಿಶೇಷವಾಗಿ ನಿರ್ಮಿತ ಗಾಜಿನ ಚೇಂಬರಿನೊಳಗೆ ಇಟ್ಟಿದ್ದರು. ರ್ಯಾಲಿ ಸಂದರ್ಭ ಮೋದಿ ನೀರು ಕುಡಿಯಲು ಉಪಯೋಗಿಸಿದ್ದ ಗಾಜಿನ ಲೋಟ ಹಾಗೂ ಅವರು ತಿಂದಿದ್ದ ಕಾನ್ಪುರದ ಖ್ಯಾತ `ತಗ್ಗು ಕೆ ಲಡ್ಡು' ಇದರ ಪೇಪರ್ ಬಾಕ್ಸನ್ನೂ ಈ ಚೇಂಬರಿನೊಳಗೆ ಇರಿಸಲಾಗಿದೆ.
ಮೋದಿಯ ಅದೃಷ್ಟದ ಕುರ್ಚಿಯನ್ನು ಜೋಪಾನವಾಗಿಡಲು ನಿರ್ಮಿಸಲಾದ ಸಲಾದ ಗ್ಲಾಸ್ ಚೇಂಬರಿಗೆ ದಿಲ್ಲಿಯಿಂದ ವಿಶೇಷವಾಗಿ ತುಂಡಾಗದ ಗ್ಲಾಸ್ ತರಿಸಲಾಗಿತ್ತು. 6 ಅಡಿ ಉದ್ದ ಹಾಗೂ 3 ಅಡಿ ಅಗಲದ ಚೇಂಬರ್ ಇದಾಗಿದೆ.
ಮೋದಿ ಡಿಸೆಂಬರ್ 19 ರಂದು ಕಾನ್ಪುರದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ತಿಳಿಯುತ್ತಿದ್ದಂತೆಯೇ ಈ ಕುರ್ಚಿಯನ್ನು ಶುಚಿಗೊಳಿಸಿ, ಪಾಲಿಶ್ ಮಾಡಿ ಪಕ್ಷದ ಕಚೇರಿಯ ಹಾಲ್ ನಲ್ಲಿರಿಸಲಾಗಿದೆ. ಮೋದಿ ಕಾನ್ಪುರಕ್ಕೆ ಡಿ.19ರಂದು ನೀಡುವ ಭೇಟಿ ಪ್ರಧಾನಿಯಾದ ನಂತರದ ಅವರ ಮೊದಲ ಭೇಟಿಯಾಗಲಿದೆ.







