ಅನಂತನಾಗ್:ಇಬ್ಬರು ಉಗ್ರರ ಹತ್ಯೆ

ಸಾಂದರ್ಭಿಕ ಚಿತ್ರ
ಶ್ರೀನಗರ,ಡಿ.9: ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾ ಪ್ರದೇಶದಲ್ಲಿ 36 ಗಂಟೆಗಳಿಂದ ನಡೆಯುತ್ತಿದ್ದ ಗುಂಡಿನ ಕಾಳಗ ಇಂದು ಅಂತ್ಯಗೊಂಡಿದ್ದು, ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.
ಭದ್ರತಾ ಪಡೆಗಳು ಇಂದು ಬೆಳಿಗ್ಗೆ ಉಗ್ರರು ಬಚ್ಚಿಟ್ಟುಕೊಂಡಿದ್ದ ಬಿಜ್ಬೆಹರಾ ಪ್ರದೇಶದ ಅರ್ವಾನಿಯಲ್ಲಿನ ಮನೆಯೊಂದನ್ನು ಸ್ಫೋಟಕಗಳನ್ನು ಬಳಸಿ ಸ್ಫೋಟಿಸಿದ ನಂತರ ಅವಶೇಷಗಳಡಿ ಅವರ ಶವಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಈ ಪೈಕಿ ಒಂದು ಶವ ತೀವ್ರವಾಗಿ ಸುಟ್ಟು ಕರಕಲಾಗಿದೆ ಎಂದರು.
ಆದರೆ ತಾವಿನ್ನೂ ಅವಶೇಷಗಳಡಿ ಶೋಧ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿಲ್ಲ. ಕಾರ್ಯಾಚರಣೆ ಮುಗಿದ ಬಳಿಕ ಘಟನೆಯ ಕುರಿತು ಅಂತಿಮ ಹೇಳಿಕೆಯನ್ನು ನೀಡಲಾಗುವುದು ಎಂದು ಸೇನಾಧಿಕಾರಿಯೋರ್ವರು ಹೇಳಿದರು.
ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ.
ಅರ್ವಾನಿಯ ಮನೆಯೊಂದರಲ್ಲಿ ಲಷ್ಕರ್-ಎ-ತಯ್ಯಬಾದ ಉಗ್ರರು ಬಚ್ಚಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದ ಬಳಿಕ ಬುಧವಾರ ಸಂಜೆಯೇ ಭದ್ರತಾ ಪಡೆಗಳು ಆ ಪ್ರದೇಶವನ್ನು ನಿರ್ಬಂಧಿಸಿದ್ದವು.
ಗುಂಡಿನ ಕಾಳಗ ನಡೆದ ಸ್ಥಳದ ಸಮೀಪದಲ್ಲಿ ನಿಂತಿದ್ದ ಅನಂತನಾಗ್ ಜಿಲ್ಲೆಯ ಆರಿಫ್ ಶಾ(24) ಎಂಬ ಯುವಕ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ಘಟನಾ ಸ್ಥಳದ ಬಳಿ ಕಲ್ಲುತೂರಾಟದಲ್ಲಿ ತೊಡಗಿದ್ದ ಗುಂಪೊಂದನ್ನು ಪೊಲೀಸರು ಎದುರಿಸುತ್ತಿದ್ದಾಗ ಆತನಿಗೆ ಗುಂಡು ತಗಲಿತ್ತು.
ಆದರೆ ಭದ್ರತಾ ಪಡೆಗಳು ಪ್ರತಿಭಟನಾಕಾರರ ವಿರುದ್ಧ ನಡೆಸಿದ ಕಾರ್ಯಾ ಚರಣೆಯಲ್ಲಿ ಶಾ ಕೊಲ್ಲಲ್ಪಟ್ಟಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.







