ಎಸ್ ಡಿ ಎಂ ಕಾಲೇಜು ವಾರ್ಷಿಕೋತ್ಸವ

ಬೆಳ್ತಂಗಡಿ, ಡಿ.9 : ಪ್ರತಿಯೋರ್ವ ವಿದ್ಯಾರ್ಥಿಯೂ ಜೀವನಕ್ಕೊಂದು ಹಾಗೂ ದೇಶದ ಭವಿಷ್ಯತ್ತಿಗೆ ತೆಗೆದುಕೊಳ್ಳುವ ನಿರ್ಧಾರ ಮಾಡಬೇಕಾಗಿದೆ. ಈ ನಿರ್ಧಾರಗಳಿಂದ ಮುಂದಿನ ಜೀವನದಲ್ಲಿ ಸಂತೋಷ ಕಾಣಬಹುದು. ಶಿಕ್ಷಣ ಬೇಕಾಗಿರುವುದು ತೃಪ್ತಿಕರ ಜೀವನ ನಡೆಸಲು. ನಾನು ಯಾವ ರೀತಿ ಬದುಕಬೇಕೆಂದು ತಿಳಿಯುತ್ತಾ ಕಲಿಯುವುದೇ ಶಿಕ್ಷಣವಾಗಿದೆ. ಶಿಕ್ಷಣ ಪಡೆಯುವಾಗ ಪ್ರತಿಯೊಂದು ವಸ್ತುಗಳಲ್ಲಿ ಕುತೂಹಲ ಹೊಂದಿರುವವನು ನಿಜವಾದ ವಿದ್ಯಾರ್ಥಿ ಎಂದು ಮುಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷಮಂಜುನಾಥ ಭಂಡಾರಿ ಹೇಳಿದರು.
ಇವರು ಉಜಿರೆಯ ಎಸ್.ಡಿ.ಎಂ.ಪ.ಪೂ ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ರಚನಾತ್ಮಕತೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಶಿಕ್ಷಣ ಪ್ರೇರಕವಾಗುತ್ತದೆ. ಶಿಕ್ಷಣ ಪಡೆಯುವುದರೊಂದಿಗೆ ದೇಶದ ಭವಿಷ್ಯ ರೂಪಿಸಲು ಸಜ್ಜಾಗಬೇಕಾಗಿದೆ ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲರಾದ ಪ್ರೊ. ಎನ್ ದಿನೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು.
ಈ ವರ್ಷದಲ್ಲಿ ವಿಶೇಷ ಸಾಧನೆ ಮಾಡಿದ ಕನ್ನಡ ಉಪನ್ಯಾಸಕ ಡಾ. ಎಂ.ಪಿ. ಶ್ರೀನಾಥ್, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳ್ ಹಾಗೂ ಎನ್.ಎಸ್.ಎಸ್. ಯೋಜನಾಧಿಕಾರಿ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ನಾಗರಾಜ್ ಭಂಡಾರಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಾಕುಮಾರಿ ವಾರ್ಷಿಕ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ ದತ್ತಿನಿಧಿ ಬಹುಮಾನಗಳು, ವಿಶೇಷ ಸಾಧನಾ ಬಹುಮಾನ ಹಾಗೂ ಕ್ರೀಡಾಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.
ಕನ್ನಡ ಭಾಷಾ ಉಪನ್ಯಾಸ ಡಾ. ಬಿ. ರಾಜೇಶ್ ಬಿ. ವಂದಿಸಿದರು,ವಿದ್ಯಾರ್ಥಿಗಳಾದ ಪ್ರಣವ ಭಟ್ ಮತ್ತು ದೀಪ್ತಿ ಪಟವರ್ಧನ್ ಕಾರ್ಯಕ್ರಮ ನಿರೂಪಿಸಿದರು.







