ಕ್ರೈಮ್ ಪ್ಯಾಟ್ರೋಲ್ ನಟ, ಆ್ಯಂಟಿ ಕರಪ್ಷನ್ ಸೊಸೈಟಿ ಅಧ್ಯಕ್ಷ 43 ಲಕ್ಷ ರೂ. ಹೊಸ ನೋಟಿನ ಜೊತೆ ವಶಕ್ಕೆ !

ಮಧ್ಯಪ್ರದೇಶ, ಡಿ.9: ಮಧ್ಯಪ್ರದೇಶ ಮೂಲದ ನಟ, ಜನಪ್ರಿಯ ಹಿಂದಿ ಟಿವಿ ಕಾರ್ಯಕ್ರಮ ‘ಕ್ರೈಂ ಪೆಟ್ರೋಲ್’ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ರಾಹುಲ್ ಚೆಲಾನಿಯನ್ನು ಹೊಶಂಗಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಹೊಸ 500 ಮತ್ತು 2000 ರೂ. ನೋಟುಗಳಲ್ಲಿದ್ದ 43 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ತನಿಖೆ ವೇಳೆ ರಾಹುಲ್ ಚೆಲಾನಿ ತಾನು ‘ಭ್ರಷ್ಟಾಚಾರ ವಿರೋಧಿ ಸಂಘ’ದ ಅಧ್ಯಕ್ಷ ಎಂದು ತಿಳಿಸಿದ್ದಾನೆ. ಆದರೆ ಇಂತಹ ಸಂಘದ ಹೆಸರೇ ಕೇಳಿಲ್ಲ ಎಂದು ಪೊಲೀಸರು ಹೇಳಿದಾಗ, ಈ ಸಂಘವು ಕೋಲ್ಕತ್ತಾದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದೂ ಈತ ತಿಳಿಸಿದ್ದಾನೆ.
ಸಿಗ್ನಲ್‌ನಲ್ಲಿ ಕಾರು ನಿಂತಾಗ ಪೊಲೀಸರು ಮಾಮೂಲಿನಂತೆ ತಪಾಸಣೆ ನಡೆಸಿದಾಗ ಈ ಹಣ ಪತ್ತೆಯಾಗಿದೆ. ಕಾರಿನಲ್ಲಿ ರಾಹುಲ್ ಚೆಲಾನಿ ಜೊತೆ ಆತನ ಸಂಬಂಧಿ ಕಪಿಲ್ ಚೆಲಾನಿ ಮತ್ತು ಡ್ರೈವರ್ ಬೃಜೇಶ್ ಚೌರೆ ಇದ್ದರು. ಪೊಲೀಸರು ಕಾರು ನಿಲ್ಲಿಸಲು ಹೇಳಿದಾಗ ಚೆಲಾನಿ ಕಾರನ್ನು ನಿಲ್ಲಿಸದೆ ವೇಗವಾಗಿ ಓಡಿಸುವಂತೆ ಡ್ರೈವರ್‌ಗೆ ಸೂಚಿಸಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಕಾರನ್ನು ತಡೆದ ಪೊಲೀಸರು ಕಾರಿನಲ್ಲಿದ್ದವರಿಗೆ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ ಅವರು ಪೊಲೀಸರೊಂದಿಗೆ ಸಹಕರಿಸಲು ನಿರಾಕರಿಸಿದ್ದಾರೆ.
ಪೊಲೀಸರಿಗೆ ಲಂಚ ಕೊಡಲು ಮುಂದಾದ ರಾಹುಲ್, ತನ್ನಲ್ಲಿದ್ದ ಹಣ ತಾನು ನಟಿಸುತ್ತಿದ್ದ ಇನ್ನೊಂದು ಟಿವಿ ಧಾರಾವಾಹಿ ‘ಸಾವಧಾನ್ ಇಂಡಿಯಾ’ ದಲ್ಲಿ ನಿರ್ವಹಿಸಿದ ಪಾತ್ರಕ್ಕೆ ನೀಡಿದ ಸಂಭಾವನೆ ಎಂದಿದ್ದಾನೆ. ತನ್ನ ಮಾವನ ಮನೆಯಲ್ಲಿ ಸೇಫ್ ಲಾಕರ್‌ನಲ್ಲಿ ಹಣ ಇಡಲು ಹೊಶಂಘಾಬಾದ್‌ನತ್ತ ಹೋಗುತ್ತಿರುವುದಾಗಿ ತಿಳಿಸಿದ್ದ. ಆದರೆ ಕಾರು ಭೋಪಾಲದತ್ತ ಸಂಚರಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ ಕಪಿಲ್, ಆಸ್ತಿಯೊಂದರ ಮಾರಾಟದಿಂದ ದೊರೆತ ಹಣ ಇದು ಎಂದಿದ್ದಾನೆ. ಬ್ಯಾಂಕಿನಲ್ಲಿ ಹಳೆಯ ನೋಟುಗಳನ್ನು ವರ್ಗಾಯಿಸಿ ಪಡೆದಿರುವುದಾಗಿದೆ ಎಂದಿದ್ದಾನೆ. ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತಂದಿದ್ದಾರೆ.







