ನೋಟು ಅಮಾನ್ಯದ ಬಗ್ಗೆ ನಾನು ಸಂಸತ್‌ನಲ್ಲಿ ಮಾತಾಡಿದರೆ ಭೂಕಂಪವಾದೀತು: ರಾಹುಲ್ ಎಚ್ಚರಿಕೆ

ಹೊಸದಿಲ್ಲಿ, ಡಿ.9: ನೋಟು ಅಮಾನ್ಯ ವಿಷಯದ ಬಗ್ಗೆ ಸಂಸತ್‌ನಲ್ಲಿ ತನಗೆ ಮಾತನಾಡಲು ಸರಕಾರ ಅವಕಾಶ ನೀಡುತ್ತಿಲ್ಲ ಎಂದು ದೂರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ವಿಷಯದ ಬಗ್ಗೆ ತನ್ನ ಭಾಷಣ ಸಿದ್ಧವಾಗಿದೆ. ಮಾತನಾಡಲು ಅವಕಾಶ ಸಿಕ್ಕಿದರೆ ಭೂಕಂಪನ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ. ಅವರು ನನಗೆ ಅವಕಾಶ ಕೊಟ್ಟು ನೋಡಲಿ. ಆಗ ಭೂಕಂಪನವೇ ಸಂಭವಿಸುತ್ತದೆ ಎಂದ ರಾಹುಲ್, ಪ್ರಧಾನಿ ಮೋದಿಯವರು ದೇಶದೆಲ್ಲೆಡೆ ಭಾಷಣ ಬಿಗಿಯುತ್ತಾರೆ. ಆದರೆ ಸಂಸತ್‌ಗೆ ಬರಲು ಹೆದರುತ್ತಿದ್ದಾರೆ. ಇವರು ಈ ರೀತಿ ‘ನರ್ವಸ್’ ಆಗಲು ಕಾರಣವೇನಿರಬಹುದು ಎಂದು ಪ್ರಶ್ನಿಸಿದರು. ಆರಂಭದಲ್ಲಿ ಸರಕಾರ ಕಪ್ಪುಹಣದ ಬಗ್ಗೆ ಮಾತನಾಡಿತು. ಬಳಿಕ ಖೋಟಾ ನೋಟಿನ ಬಗ್ಗೆ ಹೇಳತೊಡಗಿತು. ಇದೀಗ ನಗದುರಹಿತ ಸಮಾಜದ ಅಭಿಯಾನ ಕುರಿತು ಮಾತನಾಡುತ್ತಿದೆ ಎಂದು ಟೀಕಿಸಿದ ರಾಹುಲ್, ನರೇಂದ್ರ ಮೋದಿ ಏಕಾಂಗಿಯಾಗಿ ಮಾಡಿದ ಭಾರೀ ಹಗರಣದ ಕುರಿತು ನನಗೆ ಮಾತಾಡಲಿದೆ. ನೋಟು ಅಮಾನ್ಯ ನಿರ್ಧಾರದಿಂದ ಕಂಗೆಟ್ಟ ಜನರ ಧ್ವನಿಯನ್ನು, ಅದರಲ್ಲೂ ವಿಶೇಷವಾಗಿ ಬಡವರ ಧ್ವನಿಯನ್ನು ಸಂಸತ್ತಿನೆದುರು ಪ್ರಸ್ತುತ ಪಡಿಸಬೇಕಿದೆ ಎಂದು ರಾಹುಲ್ ಹೇಳಿದರು.
ಇದಕ್ಕೂ ಮುನ್ನ, ಲೋಕಸಭೆಯಲ್ಲಿ ಇಂದಿನ ಕಲಾಪದ ವೇಳೆ ಮಾತನಾಡಿದ ಕಾಂಗ್ರೆಸ್, ಕಳೆದ 16 ದಿನಗಳಿಂದ ಸಂಸತ್ತಿನ ಕಲಾಪಕ್ಕೆ ವಿಘ್ನ ತಂದ ಕಾರಣಕ್ಕೆ ಸರಕಾರ ಜನರ ಕ್ಷಮೆ ಕೇಳಿದರೆ ತಾನು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿದ್ಧ ಎಂದು ತಿಳಿಸಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾದ ಕಾರಣ ಕಲಾಪವನ್ನು ಮುಂದೂಡಲಾಯಿತು.





