ವಿಶ್ವದ ದಢೂತಿ ಮಹಿಳೆಗೆ ಪ್ರಯಾಣದ್ದೇ ಸಮಸ್ಯೆ

ಮುಂಬೈ, ಡಿ.9: ವಿಶ್ವದ ಅತ್ಯಂತ ಭಾರದ ಮಹಿಳೆ ಐಮನ್ ಅಹ್ಮದ್ ಅಬ್ದುಲಾತಿ ಎಂಬಾಕೆ ತನ್ನ ದೇಹಭಾರದ ಕಾರಣದಿಂದ ಜೀವನವಿಡೀ ಸಂಕಷ್ಟ ಅನುಭವಿಸಿದ್ದಾಳೆ! ಮುಂಬೈಯಲ್ಲಿ ಜೀವರಕ್ಷಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಆಕೆ ಇಚ್ಛಿಸಿದರೆ, ಅದಕ್ಕವಳು ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ.
ಈಜಿಪ್ಟ್‌ನ ಐಮನ್ ಬರೊಬ್ಬರಿ 500 ಕಿ.ಗ್ರಾಂ ತೂಗುತ್ತಾಳೆ. ಅವಳ ದೇಹ ಗಾತ್ರ ಏರ್ ಆ್ಯಂಬುಲೆನ್ಸ್‌ನೊಳಗೆ ಹಿಡಿಸಲಾರದಷ್ಟಿದೆ. ಅಂದರೆ, ಆಕೆ ಈಜಿಪ್ಟ್‌ನಿಂದ ಮುಂಬೈಗೆ ಬರಬೇಕಾದರೆ, ವಾಣಿಜ್ಯ ವಿಮಾನವೊಂದಕ್ಕಾಗಿ ಅವಳ ಕುಟುಂಬಿಕರು ರೂ.20 ಲಕ್ಷ ಕಟ್ಟಬೇಕಾಗುತ್ತದೆ. ಮುಂಬೈಯ ವೈದ್ಯ ಡಾ. ಮುಫ್ಫಝಲ್ ಲಕ್ಡಾವಾಲಾ ಎಂಬವರು ಆಕೆಗೆ ಚಿಕಿತ್ಸೆ ನೀಡಲು ಒಪ್ಪಿದ್ದಾರೆ.
ಸಂಪೂರ್ಣ ಪಾರದರ್ಶಕತೆಗಾಗಿ ತಾವು ಐಮನ್‌ಳ ಹೆಸರಿನಲ್ಲಿ ಖಾತೆಯೊಂದನ್ನು ತೆರೆಯಲಿದ್ದೇವೆ ತಾವು ಹಣವನ್ನು ಹೇಗೆ ಉಪಯೋಗಿಸುತ್ತಿದ್ದೇವೆಂದು ದಾನಿಗಳಿಗೆ ತಿಳಿಯುತ್ತದೆ. ರೋಗಿಯ ಕುಟುಂಬಿಕರು ಬಡವರಾಗಿರುವುದರಿಂದ ಆಸ್ಪತ್ರೆಯು ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಧರ್ಮಾರ್ಥ ಒದಗಿಸಲಿದೆಯೆಂದು ಸೈಫಿ ಆಸ್ಪತ್ರೆಯ ವೈದ್ಯ ಲಕ್ಡಾವಾಲಾ ತಿಳಿಸಿದ್ದಾರೆ.
ಅಬ್ದುಲಾತಿ ಬೆರಳಚ್ಚು ಸ್ಕಾನಿಂಗ್‌ಗಾಗಿ ದೂತಾವಾಸಕ್ಕೆ ಬರುವುದು ಅಸಾಧ್ಯವೆಂದು ತಿಳಿಸಿದಾಗ ದೂತಾವಾಸದ ಅಧಿಕಾರಿಗಳು ನಂಬಲಿಲ್ಲ. ಅದರಿಂದಾಗಿ ಆಕೆಗೆ ವೈದ್ಯಕೀಯ ವೀಸಾ ಪಡೆಯಲು ಕಷ್ಟವಾಗಿತ್ತು. ಆದರೆ, ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರ ಮಧ್ಯಪ್ರವೇಶದಿಂದಾಗಿ ಅವಳಿಗೆ ವೀಸಾ ದೊರೆಯಿತು.
ಮುಂದಿನ ಸಮಸ್ಯೆ ಪ್ರಯಾಣ. ವೈದ್ಯರು ಏರ್ ಆ್ಯಂಬುಲೆನ್ಸ್ ಕಳುಹಿಸಿಕೊಟ್ಟರೂ ಅದರ ಬಾಗಿಲು ಐಮನ್ ಪ್ರವೇಶಿಸುವಷ್ಟು ದೊಡ್ಡದಿಲ್ಲವೆಂದು ಅವರಿಗೆ ತಿಳಿಸಲಾಯಿತು.
ವಾಣಿಜ್ಯ ವಿಮಾನದಲ್ಲಿ ಒಂದಷ್ಟು ಪರಿವರ್ತನೆ ಮಾಡಿ, ಅದರಲ್ಲೇ ತರುವುದು ಸುಲಭವೆಂದು ಬಳಿಕ ನಿರ್ಧರಿಸಲಾಗಿದೆ.







