ನೋಟು ರದ್ದತಿ ಹಗರಣದ ಬಗ್ಗೆ ಲೋಕಸಭೆಯಲ್ಲಿ ಬಹಿರಂಗಪಡಿಸುವೆ: ರಾಹುಲ್

ಹೊಸದಿಲ್ಲಿ, ಡಿ.9: ನೋಟು ರದ್ದತಿಯ ಕುರಿತು ಸಂಸತ್ತಿನಲ್ಲಿ ಮಾತನಾಡಲು ತನಗೆ ಅವಕಾಶ ನೀಡುತ್ತಿಲ್ಲವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ. ಅದೊಂದು ‘ದೊಡ್ಡ ಹಗರಣ’ ಎಂದಿರುವ ಅವರು, ದೊಡ್ಡ ನೋಟು ರದ್ದತಿ ಕ್ರಮದ ಹಿಂದೆ ಏನಿತ್ತೆಂಬುದನ್ನು ತಾನು ಸದನದಲ್ಲಿ ಬಹಿರಂಗಪಡಿಸುತ್ತೇನೆಂದು ಹೇಳಿದ್ದಾರೆ.
ಸಂಸತ್ತಿನ ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ರಾಹುಲ್, ತನ್ನ ಪಕ್ಷವು ನೋಟು ರದ್ದತಿಯ ಕುರಿತು ಚರ್ಚೆಯನ್ನು ಬಯಸುತ್ತಿದೆ. ಸತ್ಯವು ಹೊರಗೆ ಬರಬೇಕು. ಆದರೆ, ಸರಕಾರ ಅದರಿಂದ ದೂರ ಓಡುತ್ತಿದೆ ಎಂದರು.
ನೋಟು ರದ್ದತಿಯ ಕುರಿತು ಮಾತನಾಡಲು ಸದನದಲ್ಲಿ ತನಗೆ ಅವಕಾಶ ಸಿಕ್ಕಿದಾಗ ಪ್ರಧಾನಿಗೆ ಅಲ್ಲಿ ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗದು ಎಂದವರು ಹೇಳಿದರು.
ಪ್ರಧಾನಿ ದೇಶಾದ್ಯಂತ ಭಾಷಣಗಳನ್ನು ಬಿಗಿಯುತ್ತಿದ್ದಾರೆ. ಆದರೆ, ಅವರು ಲೋಕಸಭೆಗೆ ಬರಲು ಹೆದರುತ್ತಿದ್ದಾರೆ. ಮೋದಿ ಅಲ್ಲಿ ಕುಳಿತುಕೊಳ್ಳಲು ಇಚ್ಛಿಸುವುದಿಲ್ಲವೆಂದ ರಾಹುಲ್, ಅವರ ಹೆದರಿಕೆಗೆ ಕಾರಣವೇನು? ಎಂದು ಪ್ರಶ್ನಿಸಿದರು.
ನೋಟು ರದ್ದತಿಯು ಭಾರತದ ಚರಿತ್ರೆಯಲ್ಲೇ ದೊಡ್ಡ ಹಗರಣವಾಗಿದೆ. ತಾನು ಲೋಕಸಭೆಯಲ್ಲಿ ಮಾತನಾಡಬಯಸುತ್ತೇನೆ. ಅಲ್ಲಿ ಎಲ್ಲವನ್ನೂ ಹೇಳುತ್ತೇನೆ. ಆದರೆ, ಸರಕಾರ ತನಗೆ ಆ ವಿಷಯದಲ್ಲಿ ಮಾತನಾಡಲು ಬಿಡುತ್ತಿಲ್ಲವೆಂದು ಅವರು ದೂರಿದರು.
ಮೊದಲು ಸರಕಾರ ಕಪ್ಪು ಹಣದ ಬಗ್ಗೆ ಮಾತನಾಡಿತು. ಬಳಿಕ ನಕಲಿ ನೋಟುಗಳ ಕಡೆಗೆ ಸಾಗಿತು. ಮತ್ತೆ ಪುನಃ ನಗದು ರಹಿತ ಸಮಾಜದ ಬಗ್ಗೆ ಮಾತನಾಡುತ್ತಿವೆ. ನರೇಂದ್ರ ಮೋದಿ ಏಕಾಂಗಿಯಾಗಿ ನಡೆಸಿರುವ ಅತಿ ದೊಡ್ಡ ಹಗರಣದ ಕುರಿತು ಹೇಳಲು ತಾನು ಬಯಸಿದ್ದೇನೆ. ಅವರ ಕ್ರಮದಿಂದ ತೊಂದರೆಗೊಳಗಾದ ಬಡವರು ಸಹಿತ ಜನರ ದನಿಯನ್ನು ಮಂಡಿಸಲು ಇಚ್ಛಿಸುತ್ತೇನೆಂದು ರಾಹುಲ್ ಹೇಳಿದರು.







