ದ.ಕೊರಿಯ ಅಧ್ಯಕ್ಷೆಗೆ ವಾಗ್ದಂಡನೆ :234-56 ಮತಗಳ ಅಗಾಧ ಅಂತರದಿಂದ ಮಸೂದೆ ಅಂಗೀಕಾರ
.jpg)
ಸಿಯೋಲ್, ಡಿ. 9: ಬೃಹತ್ ಭ್ರಷ್ಟಾಚಾರ ಹಗರಣವೊಂದರಲ್ಲಿ ಸಿಲುಕಿಕೊಂಡಿರುವ ದಕ್ಷಿಣ ಕೊರಿಯ ಅಧ್ಯಕ್ಷೆ ಪಾರ್ಕ್ ಗುಯನ್ ಹೈ ವಿರುದ್ಧ ಸಂಸತ್ತಿನಲ್ಲಿ ಮಂಡಿಸಲಾಗಿರುವ ವಾಗ್ದಂಡನೆ ಮಸೂದೆಯನ್ನು ಸಂಸದರು ಇಂದು ಅನುಮೋದಿಸಿದ್ದಾರೆ.
ಇದರೊಂದಿಗೆ, ಅಧ್ಯಕ್ಷೆಯ ಹಲವಾರು ನಿರಂಕುಶ ಅಧಿಕಾರಗಳು ಮೊಟಕುಗೊಂಡಿವೆ.
ನ್ಯಾಶನಲ್ ಅಸೆಂಬ್ಲಿಯಲ್ಲಿ ಅಂಗೀಕಾರಗೊಂಡ ಮಸೂದೆಯು ಪಾರ್ಕ್‌ರ ಅಧಿಕಾರಗಳನ್ನು ಪ್ರಧಾನಿಗೆ ವರ್ಗಾಯಿಸುತ್ತದೆ. ಅದೇ ವೇಳೆ, ಅಧಿಕಾರ ವರ್ಗಾವಣೆ ಕುರಿತ ನಿರ್ಧಾರವನ್ನು ಅನುಮೋದಿಸಿ ಅಧ್ಯಕ್ಷೆಯನ್ನು ಅಧಿಕಾರದಿಂದ ಶಾಶ್ವತವಾಗಿ ತೆಗೆದುಹಾಕುವುದೇ ಎಂಬ ಕುರಿತ ನಿರ್ಧಾರವನ್ನು ಸಾಂವಿಧಾನಿಕ ನ್ಯಾಯಾಲಯವು ತೆಗೆದುಕೊಳ್ಳುತ್ತದೆ.
ನ್ಯಾಯಾಲಯವು ತನ್ನ ನಿರ್ಧಾರಕ್ಕೆ ಬರಲು ಆರು ತಿಂಗಳ ಸಮಯಾವಕಾಶವನ್ನು ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ಪಾರ್ಕ್ ಅಧ್ಯಕ್ಷೀಯ ಬ್ಲೂ ಹೌಸ್‌ನಲ್ಲಿ ನೆಲೆಸಬಹುದು.
ವಾಗ್ದಂಡನೆ ಮಸೂದೆ ಅಂಗೀಕಾರಗೊಳ್ಳಲು ಮೂರನೆ ಎರಡು ಸಂಸದರ ಬೆಂಬಲ ಅಗತ್ಯವಾಗಿತ್ತು. ಆದರೆ, ಮಸೂದೆಯು 300 ಸದಸ್ಯ ಬಲದ ಸದನದಲ್ಲಿ 234-56 ಮತಗಳ ಭರ್ಜರಿ ಅಂತರದಿಂದ ಅಂಗೀಕಾರಗೊಂಡಿತು.
‘‘ಅಧ್ಯಕ್ಷೆ ಪಾರ್ಕ್ ಗುಯನ್ ಹೈ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಮಸೂದೆ ಅಂಗೀಕಾರಗೊಂಡಿದೆ ಎಂಬುದಾಗಿ ನಾನು ಘೋಷಿಸುತ್ತೇನೆ’’ ಎಂದು ಸ್ಪೀಕರ್ ಚುಂಗ್ ಸೆ-ಕ್ಯುನ್ ಪ್ರಕಟಿಸಿದರು.
ಖಾಸಗಿ ಟ್ರಸ್ಟ್‌ಗಳಿಗೆ ದೇಶದ ಕೈಗಾರಿಕೋದ್ಯಮಿಗಳಿಂದ ದೇಣಿಗೆ ಸಂಗ್ರಹಿಸಲು ತನ್ನ ಖಾಸಾ ಸ್ನೇಹಿತೆಗೆ ಅಧಿಕಾರ ನೀಡಿದ ಆರೋಪವನ್ನು ಪಾರ್ಕ್ ಎದುರಿಸುತ್ತಿದ್ದಾರೆ. ಆ ಸ್ನೇಹಿತೆಯು ಅಧ್ಯಕ್ಷೆಯ ಹೆಸರು ಮತ್ತು ಪದವಿಯನ್ನು ದುರ್ಬಳಕೆ ಮಾಡಿಕೊಂಡು ಭಾರೀ ಪ್ರಮಾಣದಲ್ಲಿ ಖಾಸಗಿ ಟ್ರಸ್ಟ್‌ಗಳಿಗೆ ದೇಣಿಗೆ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಕೆರಳಿರುವ ದೇಶದ ಜನರು, ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಹಲವು ದಿನಗಳ ಕಾಲ ಅಧ್ಯಕ್ಷೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಉಸ್ತುವಾರಿ ಅಧ್ಯಕ್ಷರಾಗಿ ಪ್ರಧಾನಿ ಅಧಿಕಾರ ಸ್ವೀಕಾರ
ದಕ್ಷಿಣ ಕೊರಿಯ ಅಧ್ಯಕ್ಷೆ ಪಾರ್ಕ್ ಗುಯನ್ ಹೈ ವಿರುದ್ಧದ ವಾಗ್ದಂಡನೆ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಬಳಿಕ, ಅಧ್ಯಕ್ಷೆಯ ಅಧಿಕಾರಗಳನ್ನು ಅಮಾನತಿನಲ್ಲಿಡಲಾಗಿದೆ ಎಂದು ಅವರ ಕಚೇರಿ ತಿಳಿಸಿದೆ.
ಪ್ರಧಾನಿ ಹ್ವಾಂಗ್ ಕ್ಯೊ-ಅಹನ್ ಉಸ್ತುವಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸ್ಥಿರ ಸರಕಾರ ಮುಂದುವರಿಯುವಂತೆ ತಾನು ನೋಡಿಕೊಳ್ಳುವೆ ಎಂದು ಅವರು ಸಚಿವ ಸಂಪುಟ ಸಭೆಗೆ ತಿಳಿಸಿದರು.







