ಇಂಡೋನೇಶ್ಯ: ಕಾಪ್ಟರ್ ಪತನಗೊಂಡ 2 ವಾರ ಬಳಿಕ ಯೋಧ ಪತ್ತೆ

ಜಕಾರ್ತ, ಡಿ. 8: ಎರಡು ವಾರಗಳ ಹಿಂದೆ ಇಂಡೋನೇಶ್ಯದ ದುರ್ಗಮ ಅರಣ್ಯದಲ್ಲಿ ಪತನಗೊಂಡಿದ್ದ ಸೇನಾ ಹೆಲಿಕಾಪ್ಟರ್‌ನಲ್ಲಿದ್ದ ಯೋಧರೊಬ್ಬರು ಪವಾಡವೆಂಬಂತೆ ಬದುಕುಳಿದಿದ್ದಾರೆ ಎಂದು ಸೇನೆಯ ವಕ್ತಾರರೊಬ್ಬರು ಶುಕ್ರವಾರ ತಿಳಿಸಿದರು.
ಬೋರ್ನಿಯೊ ದ್ವೀಪದ ಜನರು ಗುರುವಾರ ಸಂಜೆ ಯೋಧ ಯೊಹಾನ್ಸ್ ಸಯಪುತ್ರ ಅವರನ್ನು ತೀರಾ ಬಸವಳಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ಸೇನಾ ವಕ್ತಾರ ಸಬ್ರಾರ್ ಫದೀಲಾಹ್ ಏಜನ್ಸ್ ಫ್ರಾನ್ಸ್-ಪ್ರೆಸ್‌ಗೆ ತಿಳಿಸಿದರು.
‘‘ದೇವರಿಗೆ ಧನ್ಯವಾದಗಳು. ಪತನಗೊಂಡ ಹೆಲಿಕಾಪ್ಟರ್‌ನ ಓರ್ವ ಪ್ರಯಾಣಿಕನನ್ನು ನಾವು ಜೀವಂತವಾಗಿ ಪತ್ತೆಹಚ್ಚಿದ್ದೇವೆ’’ ಎಂದು ಬರಹ ಸಂದೇಶವೊಂದರಲ್ಲಿ ಫದೀಲಾಹ್ ಹೇಳಿದರು.
‘‘ಸಂತ್ರಸ್ತನ ಕೈಗಳು, ಸೊಂಟ ಮತ್ತು ಕಾಲುಗಳಲ್ಲಿ ಗಾಯಗಳು ಪತ್ತೆಯಾಗಿವೆ. ತುಂಬಾ ದಿನಗಳಿಂದ ತಿನ್ನದಿದ್ದರಿಂದ ತುಂಬಾ ಬಸವಳಿದಿದ್ದಾರೆ’’ ಎಂದರು.
ಸಯಪುತ್ರ ಮತ್ತು ಇತರ ನಾಲ್ವರು ಸೇನಾ ಸಿಬ್ಬಂದಿ ನವೆಂಬರ್ 24ರಂದು ಪ್ರಯಾಣಿಸುತ್ತಿದ್ದ ಬೆಲ್ 412 ಹೆಲಿಕಾಪ್ಟರ್ ದುರ್ಗಮ ಬೋರ್ನಿಯನ್ ಅರಣ್ಯದಲ್ಲಿ ಪತನಗೊಂಡಿತ್ತು.
ಆ ಹೆಲಿಕಾಪ್ಟರನ್ನು ಮಲೇಶ್ಯದ ಗಡಿಯಲ್ಲಿರುವ ದೂರದ ಸೇನಾ ನೆಲೆಯೊಂದಕ್ಕೆ ನಿಯೋಜಿಸಲು ಕೊಂಡೊಯ್ಯಲಾಗುತ್ತಿತ್ತು.
ಅದರ ಅವಶೇಷಗಳು ಮೂರು ದಿನಗಳ ಬಳಿಕ ಪತ್ತೆಯಾಗಿದ್ದವು. ಸಿಬ್ಬಂದಿ ಮೃತಪಟ್ಟಿದ್ದರು ಹಾಗೂ ಬದುಕುಳಿದಿದ್ದ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿತ್ತು.
ಆದರೆ, ಸಯಪುತ್ರ ಪತ್ತೆಯಾಗಿರಲಿಲ್ಲ.







