4,700 ಕೋಟಿ ರೂ.ಪರಿಹಾರ ನೀಡಲು ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ

ಹೊಸದಿಲ್ಲಿ, ಡಿ. 9: ರಾಜ್ಯದಲ್ಲಿನ ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 4,703 ಕೋಟಿ ರೂ. ನೆರವು ನೀಡಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಂಬಂಧ ಮನವಿ ಸಲ್ಲಿಸಿದರು. ಅಲ್ಲದೆ, ವಿಶೇಷ ಅನುದಾನ ರೂಪದಲ್ಲಿ 967.76 ಕೋಟಿ ರೂ.ಗಳನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಬೇಕೆಂದು ಕೋರಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ಪ್ರವಾಹದಿಂದಾಗಿ ಆಗಿರುವ ಹಾನಿ ಕುರಿತು ಕೇಂದ್ರ ಸಚಿವ ರಾಜನಾಥ ಸಿಂಗ್ ಜೊತೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ, ಬರದಿಂದ 17,193ಕೊಟಿ ರೂ.ಹಾನಿಯಾಗಿದ್ದು, ಸರಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಸಂಕಷ್ಟದಲ್ಲಿರುವ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಅಗತ್ಯ ಮೇವು ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಈಗಾಗಲೇ ರಾಜ್ಯದ 139 ತಾಲೂಕುಗಳನ್ನು ಬರ ಪೀಡಿತ ಎಂದು ಸರಕಾರ ಘೋಷಿಸಿದೆ ಎಂದು ರಾಜನಾಥ ಸಿಂಗ್ ಅವರಿಗೆ ವಿವರಿಸಿದರು.
ಬರ ಪರಿಸ್ಥಿತಿಯಲ್ಲಿನ ಜನರಿಗೆ ನೆರವಾಗಲು ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿ ವಿವಿಧ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದು, ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಈವರೆಗೆ ಪರಿಹಾರ ಕಾಮಗಾರಿ ಮತ್ತು ಕುಡಿಯುವ ನೀರು ಪೂರೈಕೆಗೆ 204 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.







