ಗುತ್ತಿಗೆದಾರನ ಬಳಿ ಭಾರೀ ಪ್ರಮಾಣದ ಹೊಸ ನೋಟು ಪತ್ತೆ?
ಬ್ಯಾಂಕ್ ಮ್ಯಾನೇಜರ್ ವಿಚಾರಣೆ ?

ಪ್ರಮುಖ ರಾಜಕಾರಣಿಯ ಆಪ್ತ ವಶಕ್ಕೆ?
ಶಿವಮೊಗ್ಗದಲ್ಲಿ ಐ.ಟಿ. ಕಾರ್ಯಾಚರಣೆ! ಶಿವಮೊಗ್ಗ, ಡಿ. 9: ಕೇಂದ್ರ ಸರಕಾರ 500 ಹಾಗೂ 1,000 ರೂ. ಮುಖಬೆಲೆಯ ಹಳೆಯ ನೋಟ್‌ಗಳನ್ನು ರದ್ದುಗೊಳಿಸಿದ ಬಳಿಕ ಶಿವಮೊಗ್ಗ ಜಿಲ್ಲಾದ್ಯಂತ ಕಾಳಧನಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ತಮ್ಮ ಹಳೇಯ ನೋಟ್‌ಗಳನ್ನು ವಾಮಮಾರ್ಗಗಳ ಮೂಲಕ ಬಿಳಿಯಾಗಿಸುವ ಕೆಲಸ ನಡೆಸುತ್ತಿದ್ದರೆ, ಮತ್ತೆ ಕೆಲವರು ಭಾರೀ ಪ್ರಮಾಣದ ಹೊಸ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದವು. ಈ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹೊರ ಜಿಲ್ಲೆಯ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳ ತಂಡವು ಪ್ರಸಿದ್ಧ ಗುತ್ತಿಗೆದಾರರೊಬ್ಬರ ಮನೆ, ಕಚೇರಿಗಳ ಮೇಲೆ ದಿಢೀರ್ ದಾಳಿ ಡೆಸಿ ಭಾರೀ ಮೊತ್ತದ ಹೊಸ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ವಿಚಾರ ಈವರೆಗೂ ಅಧಿಕೃತವಾಗಿಲ್ಲ. ಐ.ಟಿ. ಇಲಾಖೆ ಕೂಡ ಈ ಕುರಿತಂತೆ ಸ್ಪಷ್ಟ ಮಾಹಿತಿ ನೀಡಿಲ್ಲ.
ಆದರೆ, ಈ ಕಾರ್ಯಾಚರಣೆಯ ಬಗ್ಗೆ ಜಿಲ್ಲೆ ಯಲ್ಲಿ ಸಾಕಷ್ಟು ವದಂತಿ ಹಬ್ಬಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ಮತ್ತೊಂದೆಡೆ ಐ.ಟಿ. ಕಾರ್ಯಾಚರಣೆಯ ಮಾಹಿತಿಯು ಶಿವಮೊಗ್ಗ ನಗರದ ಕಾಳಧನಿಕರು ಹಾಗೂ ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿದ್ದವರಲ್ಲಿ ತೀವ್ರ ನಡುಕ ಹುಟ್ಟಿಸಿದ್ದು ನಿದ್ದೆಗೆಡುವಂತೆ ಮಾಡಿದೆ. ವಶಕ್ಕೆ?: ತೀರ್ಥಹಳ್ಳಿ ಮೂಲದ ಪ್ರಸಿದ್ಧ ಗುತ್ತಿಗೆದಾರರೊಬ್ಬರು ಭಾರೀ ಪ್ರಮಾಣದ ಹೊಸ ನೋಟು ದಾಸ್ತಾನು ಮಾಡಿದ್ದು ಐ.ಟಿ. ಅಧಿಕಾರಿಗಳಿಗೆ ಲಭಿಸಿದೆ.
ಅಲ್ಲದೆ, ನಗದು, ಆಸ್ತಿಪಾಸ್ತಿಗಳ ದಾಖಲೆ ಪತ್ರಗಳನ್ನು ಕೂಡ ಐ.ಟಿ. ಇಲಾಖೆ ತನ್ನ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ನಡುವೆ ಗುತ್ತಿಗೆದಾರರ ಸಹೋದರ ಹಾಗೂ ಪ್ರಮುಖ ರಾಜಕಾರಣಿಯೊಬ್ಬರ ಆಪ್ತರ ಬಳಿ ಇದ್ದ ಭಾರೀ ಪ್ರಮಾಣದ ನಗದು ಹಾಗೂ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ವಿಚಾರಣೆ: ರದ್ದುಗೊಂಡಿರುವ ಹಣವನ್ನು ಹೊಸ ನೋಟುಗಳಿಗೆ ಪರಿವರ್ತನೆ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್‌ವೊಂದರ ಮ್ಯಾನೇಜರ್ ಹಾಗೂ ಕೆಲ ಸಿಬ್ಬಂದಿಯನ್ನು ಐ.ಟಿ. ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿ, ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲೆಯ ಕೆಲ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಮಿಷನ್ ಆಧಾರದ ಮೇಲೆ ಕಾಳಧನಿಕರಿಂದ ಹಳೆಯ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ಗುಪ್ತವಾಗಿ ನೀಡುತ್ತಿದ್ದ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು. ಶಿವಮೊಗ್ಗದ ಕಾಳಧನಿಕರ ಮೇಲೆ ಐ.ಟಿ., ಸಿಬಿಐ, ಇಡಿ ಕಣ್ಣು?
ಶಿವಮೊಗ್ಗದ ನಗರದಲ್ಲಿ ಕೆಲವರು ಭಾರೀ ದೊಡ್ಡ ಪ್ರಮಾಣದಲ್ಲಿ ತಮ್ಮ ಬಳಿ ಇರುವ ಕಪ್ಪು ಹಣವನ್ನು ಗುಪ್ತವಾಗಿ ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿರುವ ಸಮಗ್ರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ಈಗಾಗಲೇ ಕೆಲ ಕಾಳಧನಿಕರ ಹಣದ ಚಲಾವಣೆಯ ಮಾಹಿತಿಯನ್ನು ಕೂಡ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಭಾರೀ ಪ್ರಮಾಣದಲ್ಲಿ ಹೊಸ ನೋಟು ಸಂಗ್ರಹಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ಐ.ಟಿ. ಅಧಿಕಾರಿಗಳಿಗೆ ಸಿಕ್ಕಿಬಿದ್ದ ಗುತ್ತಿಗೆದಾರರೊಬ್ಬರು ಶಿವಮೊಗ್ಗದಲ್ಲಿಯೂ ಬಹು ಕೋಟಿ ರೂ. ವೌಲ್ಯದ ಸರಕಾರಿ ಕಾಮಗಾರಿ ನಡೆಸುತ್ತಿದ್ದು, ಇಲ್ಲಿನ ಹಲವು ಪ್ರಭಾವಿಗಳೊಂದಿಗೆ ಹಣದ ವ್ಯವಹಾರ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐ ಅಧಿಕಾರಿಗಳು ಶಿವಮೊಗ್ಗಕ್ಕೆ ಆಗಮಿಸಿ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.







