23ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದ ಅಶ್ವಿನ್

ಮುಂಬೈ, ಡಿ.9: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ನಾಲ್ಕನೆ ಟೆಸ್ಟ್‌ನ ಎರಡನೆ ದಿನದಾಟದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಭಾರತದ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಟೆಸ್ಟ್ ವೃತ್ತಿಜೀವನದಲ್ಲಿ 23ನೆ ಬಾರಿ ಐದು ವಿಕೆಟ್‌ಗಳ ಗೊಂಚಲು ಕಬಳಿಸಿದರು.
ಭಾರತದ ಪರ 43ನೆ ಪಂದ್ಯವನ್ನಾಡುತ್ತಿರುವ ಅಶ್ವಿನ್ ದಿನದ ಎರಡನೆ ಓವರ್‌ನಲ್ಲಿ ಇಂಗ್ಲೆಂಡ್‌ನ ಬೆನ್‌ಸ್ಟೋಕ್ಸ್ ವಿಕೆಟ್‌ನ್ನು ಪಡೆಯುವುದರೊಂದಿಗೆ ಸ್ವದೇಶಿ ನೆಲದಲ್ಲಿ 18ನೆ ಬಾರಿ ಐದು ವಿಕೆಟ್ ಪೂರೈಸಿದರು.
ಒಟ್ಟಾರೆ 23ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದ ಅಶ್ವಿನ್ ಮೂರನೆ ಗರಿಷ್ಠ ಸಂಖ್ಯೆಯ 5 ವಿಕೆಟ್ ಪಡೆದ ಸಾಧನೆಯನ್ನು ಕಪಿಲ್‌ದೇವ್‌ರೊಂದಿಗೆ ಹಂಚಿಕೊಂಡರು. ಅನಿಲ್ ಕುಂಬ್ಳೆ(35) ಹಾಗೂ ಹರ್ಭಜನ್ ಸಿಂಗ್(25) ಗರಿಷ್ಠ ಐದು ವಿಕೆಟ್ ಗೊಂಚಲು ಕಬಳಿಸಿದ ಭಾರತದ ಇನ್ನಿಬ್ಬರು ಬೌಲರ್‌ಗಳಾಗಿದ್ದಾರೆ. ತಮಿಳುನಾಡಿನ ಬೌಲರ್ ಅಶ್ವಿನ್ ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಎರಡನೆ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಅಶ್ವಿನ್ ವಿಶಾಖಪಟ್ಟಣದಲ್ಲಿ ನಡೆದ 2ನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಕಬಳಿಸಿದ್ದರು.
ಅಶ್ವಿನ್ ಇದೀಗ ಇಂಗ್ಲೆಂಡ್‌ನ ವಿರುದ್ಧ ಪ್ರಸ್ತುತ ಸರಣಿಯಲ್ಲಿ ಒಟ್ಟು 20 ವಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ ನ್ಯೂಝಿಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದರು.
ಅಶ್ವಿನ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 891 ಅಂಕವನ್ನು ಗಳಿಸಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.





