ಚೆನ್ನೈ ಟೆಸ್ಟ್ ಅಬಾಧಿತ, ಊಹಾಪೋಹಕ್ಕೆ ತೆರೆ

ಚೆನ್ನೈ, ಡಿ.9: ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಚೆನ್ನೈನಲ್ಲಿ ಡಿ.16 ರಂದು ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುವ ಕುರಿತಂತೆ ಇದ್ದ ಊಹಾಪೋಹಕ್ಕೆ ತೆರೆ ಬಿದ್ದಿದೆ. ಈ ಪಂದ್ಯವು ವೇಳಾಪಟ್ಟಿಯಂತೆಯೇ ನಡೆಯಲಿದೆ.
ಸೋಮವಾರ ರಾತ್ರಿ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನರಾದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಐದನೆ ಟೆಸ್ಟ್ ಪಂದ್ಯ ನಡೆಯುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಎದ್ದಿತ್ತು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ)ಗೆ ಪತ್ರ ಬರೆದು ಚೆನ್ನೈ ನಗರದ ಪರಿಸ್ಥಿತಿಯ ಬಗ್ಗೆ ವಿಚಾರಿಸಿತ್ತು. ಉಭಯ ತಂಡಗಳಿಗೆ ಮಾಡಲಾದ ಭದ್ರತಾ ವ್ಯವಸ್ಥೆ ಹಾಗೂ ಪಂದ್ಯ ನಡೆಯುವ ಎಂ.ಎ.ಚಿದಂಬರಂ ಸ್ಟೇಡಿಯಂನ ಬಗ್ಗೆ ಮಾಹಿತಿ ಕಲೆ ಹಾಕಿತ್ತು.
‘‘ಎಲ್ಲ ಗೊಂದಲಗಳು ಬಗೆಹರಿದಿದೆ. ಈ ಬಗ್ಗೆ ನಾವು ಬಿಸಿಸಿಐಗೆ ಮಾಹಿತಿ ನೀಡಿದ್ದೇವೆ. ನಾನು ನಗರ ಕಮಿಶನರ್ ಬಳಿ ಮಾತುಕತೆ ನಡೆಸಿದ್ದೇನೆ. ನಮ್ಮ ಮಾತುಕತೆ ಯಶಸ್ವಿಯಾಗಿದೆ’’ ಎಂದು ಟಿಎನ್‌ಸಿಎ ಕಾರ್ಯದರ್ಶಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ಚೆನ್ನೈ ನಗರ 2013ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು.





