ಮಲ್ಯರ ಟ್ವಿಟರ್ ಖಾತೆ ಹ್ಯಾಕ್!
ಹೊಸದಿಲ್ಲಿ, ಡಿ.9: ದೇಶಭ್ರಷ್ಟ ಮದ್ಯ ದೊರೆ ವಿಜಯ ಮಲ್ಯರ ಟ್ವಿಟರ್ ಖಾತೆಯನ್ನು ‘ಲಿಜಿಯನ್’ ಎಂದು ಕರೆದುಕೊಂಡಿರುವ ಗುಂಪೊಂದು ಶುಕ್ರವಾರ ಹ್ಯಾಕ್ ಮಾಡಿರುವಂತೆ ಕಂಡುಬಂದಿದೆ. ಕಳೆದ ವಾರ ರಾಹುಲ್‌ಗಾಂಧಿಯವರ ಟ್ವಿಟರ್ ಖಾತೆಯನ್ನೂ ಇದೇ ಗುಂಪು ಹ್ಯಾಕ್ ಮಾಡಿತ್ತು.
ಇಂದು ಮುಂಜಾನೆ ಮಲ್ಯರ ಟೈಂಲೈನ್‌ನಲ್ಲಿ ಹಲವಾರು ಬೈಗುಳ ಹಾಗೂ ಬೆದರಿಕೆಯ ಟ್ವೀಟ್‌ಗಳು ಕಾಣಿಸಿಕೊಂಡಿದ್ದವು. ಇದರಿಂದ ವಿಚಲಿತರಾದ ಅವರು, ಲಿಜಿಯನ್ ಎಂದು ಕರೆದುಕೊಂಡಿರುವ ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಅವರೀಗ ತನ್ನ ಹೆಸರಿನಲ್ಲಿ ಟ್ವೀಟಿಸುತ್ತಿದ್ದಾರೆ. ಅದನ್ನು ನಿರ್ಲಕ್ಷಿಸಿರಿ. ಅದನ್ನು ಸರಿಪಡಿಸಲಾಗುವುದು ಹಾಗೂ ಲಿಜಿಯನ್ ಎಂದು ಕರೆದುಕೊಂಡಿರುವ ಗುಂಪೊಂದು ತನ್ನ ಇ-ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದೆ. ಅದು ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದೆ. ಎಂತಹ ವಿನೋದ! ಎಂದು ಟ್ವೀಟ್ ಮಾಡಿದ್ದಾರೆ.
ಮಲ್ಯರ ಸಂಪತ್ತು, ಆಸ್ತಿಗಳು, ಹೂಡಿಕೆಗಳು, ದೂರವಾಣಿ ಸಂಖ್ಯೆಗಳು ಹಾಗೂ ಪಾಸ್‌ವರ್ಡ್‌ಗಳೆಂದು ಪ್ರತಿಪಾದಿಸಿರುವ ವಿವರವನ್ನು ಹ್ಯಾಕರ್‌ಗಳು ಪೋಸ್ಟ್ ಮಾಡಿದ್ದಾರೆ.
ಈ ಕ್ರಿಮಿನಲ್‌ಗಳನ್ನು ಕಟಕಟೆಗೆ ತರಲು ಅಗತ್ಯವಾದ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ. ಲೆಜಿಯನನ್ನು ಬೆಂಬಲಿಸಿರಿ’’ ಎಂದಿರುವ ಹ್ಯಾಕರ್‌ಗಳು ಬ್ಲಾಕ್ ಮೇಲ್ ಆರೋಪವನ್ನು ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಪೋಸ್ಟ್ ಮಾಡುವ ಬೆದರಿಕೆಯನ್ನು ಅವರು ಹಾಕಿದ್ದಾರೆ.





