ಮಂಗೋಲಿಯಕ್ಕೆ ಚೀನಾ ಮಾಧ್ಯಮ ಎಚ್ಚರಿಕೆ
ಭಾರತದ ನೆರವು ಕೋರಲು ಮುಂದಾಗಿರುವುದಕ್ಕೆ ಅಸಮಾಧಾನ
ಬೀಜಿಂಗ್, ಡಿ. 9: ಭಾರತದ ನೆರವು ಪಡೆಯುವುದು ರಾಜಕೀಯ ಮೂರ್ಖತನದ ಕೆಲಸವಾಗಿದೆ ಎಂದು ಚೀನಾದ ಅಧಿಕೃತ ಮಾಧ್ಯಮ ಇಂದು ಮಂಗೋಲಿಯಕ್ಕೆ ಎಚ್ಚರಿಕೆ ನೀಡಿದೆ. ಮಂಗೋಲಿಯದ ಈ ಕ್ರಮವು ಚೀನಾದೊಂದಿಗಿನ ಅದರ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ‘ಗ್ಲೋಬಲ್ ಟೈಮ್ಸ್’ ಹೇಳಿದೆ.
ಮಂಗೋಲಿಯವು ಹಲವು ಕಾರಣಗಳಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಭಾರತದ ನೆರವು ಕೋರಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪತ್ರಿಕೆಯಿಂದ ಈ ಎಚ್ಚರಿಕೆ ಹೊರಬಿದ್ದಿದೆ. ಚೀನಾವು ಮಂಗೋಲಿಯದ ವಿರುದ್ಧ ವಿಧಿಸಿರುವ ‘ಗಡಿ ಶುಲ್ಕ’ವೂ ಮಂಗೋಲಿಯದ ಆರ್ಥಿಕ ಸಂಕಷ್ಟಕ್ಕೆ ಒಂದು ಕಾರಣವಾಗಿದೆ. ಭಾರತಕ್ಕೆ ಮಂಗೋಲಿಯದ ರಾಯಭಾರಿಯಾಗಿರುವ ಗೊನ್‌ಚಿಗ್ ಗನ್‌ಬೋಲ್ಡ್, ಚೀನಾದ ಕ್ರಮಗಳನ್ನು ಎದುರಿಸಲು ಭಾರತದ ಬೆಂಬಲವನ್ನು ಕೋರಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಲು ಚೀನಾ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ನಿನ್ನೆ ನಿರಾಕರಿಸಿದ್ದರು. ಅಂಥ ಯಾವುದೇ ಹೇಳಿಕೆಯನ್ನು ತಾನು ಕೇಳಿಲ್ಲ ಎಂದರು.
‘‘ರಶ್ಯ ಮತ್ತು ಚೀನಾಗಳ ನಡುವೆ ಇರುವ ಮಂಗೋಲಿಯ ಎರಡೂ ದೇಶಗಳಿಂದ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ತಟಸ್ಥ ದೇಶವಾಗಿ ಉಳಿಯುವ ನಿರ್ಧಾರ ತೆಗೆದುಕೊಂಡಿದೆ. ಪ್ರಭಾವಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ಅದು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ’’ ಎಂದು ‘ಗ್ಲೋಬಲ್ ಟೈಮ್ಸ್’ನಲ್ಲಿ ಪ್ರಕಟಗೊಂಡ ಲೇಖನವೊಂದು ಹೇಳಿದೆ.





