ಮಾಹಿತಿ ಹಕ್ಕಿಗಾಗಿ ಸಂಘಟಿತ ಹೋರಾಟ ಅವಶ್ಯ: ನರೇಂದ್ರ ನಾಯಕ್
ಮಂಗಳೂರು, ಡಿ.10: ಮಾಹಿತಿ ಹಕ್ಕು ಪಡೆಯುವುದು ಮಾನವನ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ನಾಗರಿಕ ಹಕ್ಕು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಿಕೊಳ್ಳಬೇಕಾದರೆ ಮಾಹಿತಿ ಹಕ್ಕಿನ ಸಮರ್ಥ ಬಳಕೆಗೆ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಅಖಿಲ ಭಾರತ ವಿಚಾರವಾದಿ ಸಂಘದ ಸದಸ್ಯ ಪ್ರೊ. ನರೇಂದ್ರ ನಾಯಕ್ ಹೇಳಿದರು.
ಮಾಹಿತಿ ಹಕ್ಕು ಕಾರ್ಯಕರ್ತರ ಸಮರ್ಥ ಬಳಕೆಗೆ ಸಂಬಂಧಿಸಿ ನಗರದ ವಿಕಾಸ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಜನಪರ ಉದ್ದೇಶದೊಂದಿಗೆ ಮಾಹಿತಿ ಹಕ್ಕು ಆಧರಿಸಿ ಸಕ್ರಿಯರಾಗಿರುವ ಕಾರ್ಯಕರ್ತರು ಸರಕಾರದ ವಿವಿಧ ಇಲಾಖೆಗಳಲ್ಲಿ ತಾವು ಅನುಭಸುತ್ತಿರುವ ತೊಂದರೆಗಳ ಬಗ್ಗೆ ಹಂಚಿಕೊಂಡರು. ಕೆಲವು ಇಲಾಖೆಗಳು ಉದ್ದೇಶಪೂರ್ವಕವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅನಿವಾರ್ಯವಾದರೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
ಮುಂದಿನ ದಿನಗಳಲ್ಲಿ ಸಂಘಟಿತ ಸ್ವರೂಪದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಬಳಕೆದಾರರ ವೇದಿಕೆಯನ್ನು ರೂಪಿಸಲಾಯಿತು.
ಸಮಿತಿಯ ಪದಾಧಿಕಾರಿಯ ಸಂಚಾಲಕರಾಗಿ ಮನೋಜ್ ವಾಮಂಜೂರು, ಸಹ ಸಂಚಾಲಕರಾಗಿ ಯೋಗೀಶ್ ಜಪ್ಪಿನಮೊಗರು, ಸುಕುಮಾರ್ ಕೆ., ಗೌರವ ಸಲಹೆಗಾರರಾಗಿ ನರೇಂದ್ರ ನಾಯಕ್, ಕೃಷ್ಣಪ್ಪಕೊಂಚಾಡಿ ಹಾಗು 7 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪ್ರಗತಿಪರ ಚಿಂತಕ ಕೃಷ್ಣಪ್ಪಕೊಂಚಾಡಿ ವಹಿಸಿದ್ದರು. ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಸಂಚಾಲಕ ಮನೋಜ್ ವಾಮಂಜೂರು ವಂದಿಸಿದರು.







