ಲೋಕ ಅದಾಲತ್‌ನಿಂದ ಸಮಸ್ಯೆಗೆ ಸ್ಪಂದನೆ: ಜೆ.ಆರ್.ಲೋಬೊ

ಮಂಗಳೂರು, ಡಿ.10: ಸರಕಾರವೇ ಜನರ ಬಳಿ ಸೇವೆಗೆ ಬರುವ ಕಾರ್ಯಕ್ರಮ ‘ಲೋಕ ಅದಾಲತ್’ ಆಗಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಇದು ಜನಪ್ರಿಯವಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ನಗರ ಹೊರವಲದಯ ಪಡೀಲ್‌ನ ಅಮೃತ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಮಂಗಳೂರು ‘ಬಿ’ ಹೋಬಳಿಯ ಅಳಪೆ ವಾರ್ಡ್‌ನ ಕಂದಾಯ ಅದಾಲತ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪಅವರ ಸೂಚನೆಯಂತೆ ನಡೆಯುತ್ತಿರುವ ಈ ಕಾರ್ಯಕ್ರಮದಿಂದ ಸ್ಥಳೀಯರ ಆಶೋತ್ತರಗಳನ್ನು ಈಡೇರಿಸುತ್ತಿದೆ. ಅನೇಕ ಕಾಲದಿಂದ ಆರ್‌ಟಿಸಿ ಸಹಿತ ಕಂದಾಯ ಇಲಾಖೆಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದವರಿಗೆ ಇದೊಂದು ಆಶಾಕಿರಣವಾಗಿ ಮಾರ್ಪಟ್ಟಿದೆ ಎಂದು ಲೋಬೋ ನುಡಿದರು.
ಈ ಸಂದರ್ಭ ಅರ್ಹರಿಗೆ ಪಿಂಚಣಿ ವಿತರಿಸಲಾಯಿತು. ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ ಮುಂತಾದ ಪಿಂಚಣಿಗಳ ಮಂಜೂರಾತಿ ಪತ್ರವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮಂಗಳೂರು ತಹಶೀಲ್ದಾರ್ ಮಹಾದೇವ, ಕಾರ್ಪೊರೇಟರ್ ಪ್ರಕಾಶ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಶೋಭಾ ಕೇಶವ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.





