ಶಶಿಕಲಾಗೆ ಎಡಿಎಂಕೆ ನಾಯಕತ್ವ?

ಚೆನ್ನೈ,ಡಿ.10: ಪಕ್ಷವನ್ನು ಮುನ್ನಡೆಸುವಂತೆ ಮಾಜಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತಗೆಳತಿ ಶಶಿಕಲಾ ನಟರಾಜನ್ ಅವರನ್ನು ಎಡಿಎಂಕೆ ನಾಯಕರು ಆಗ್ರಹಿಸಿದ್ದಾರೆ ಎಂದು ಪಕ್ಷವು ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದೆ. ಜಯಲಲಿತಾ ಅವರು ಪಕ್ಷದ ಖಾಯಂ ಪ್ರಧಾನ ಕಾರ್ಯದರ್ಶಿಯಾಗಿರಬೇಕು ಎಂದು ಎಡಿಎಂಕೆ ನಾಯಕರು ಬಯಸಿದ್ದಾರೆ, ಹೀಗಾಗಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಯಂತಹ ನೂತನ ಹುದ್ದೆಯನ್ನು ಸೃಷ್ಟಿಸುವ ಕುರಿತು ಅವರು ಚರ್ಚಿಸುತ್ತಿದ್ದಾರೆ ಎಂದು ಪಕ್ಷದಲ್ಲಿನ ಮೂಲಗಳು ತಿಳಿಸಿದವು. ಪಕ್ಷದ ಸಾಮಾನ್ಯ ಮಂಡಳಿಯ ಸಭೆಗೆ ಮುನ್ನ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದೂ ಅವು ತಿಳಿಸಿದವು.
ಹಿರಿಯ ಸಚಿವರು ಜಯಲಲಿತಾರ ಪೋಯೆಸ್ ಗಾರ್ಡನ್ ನಿವಾಸಕ್ಕೆ ತೆರಳಿ ಶಶಿಕಲಾರನ್ನು ಭೇಟಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಡಿಎಂಕೆ ಜಯಲಲಿತಾಗೆ ಶಶಿಕಲಾರ ನಿಷ್ಠೆ ಮತ್ತು ಅವರ ಸಾಮರ್ಥ್ಯವನ್ನು ಪ್ರಶಂಸಿಸುತ್ತಿದೆ. ತನ್ಮಧ್ಯೆ,ಜಯಲಲಿತಾರ ನಿಧನದ ಬಳಿಕ ತಮಿಳುನಾಡು ಸಂಪುಟವು ಮೊದಲ ಬಾರಿಗೆ ಇಂದು ಅಧಿಕೃತ ಸಭೆಯನ್ನು ನಡೆಸಿದೆ.
ಪುರಚ್ಚಿ ತಲೈವಿ ಅಮಾ ್ಮತೋರಿಸಿರುವ ದಾರಿಯಲ್ಲಿ ಪಕ್ಷವವನ್ನು ಮುನ್ನಡೆಸುವಂತೆ ಪಕ್ಷದ ಹಿರಿಯ ಪದಾಧಿಕಾರಿಗಳು ತಿರುಮತಿ ಶಶಿಕಲಾ ಅವರನ್ನು ಆಗ್ರಹಿಸುತ್ತಾರೆ ಎಂದು ಎಡಿಎಂಕೆ ಟ್ವೀಟ್ ಮಾಡಿದೆ.
ಶಶಿಕಲಾ ಯಾವುದೇ ಹುದ್ದೆಯಲ್ಲಿಲ್ಲದಿದ್ದರೂ ಈ ವಾರ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಅಧಿಕಾರವನ್ನು ಚಲಾಯಿಸಿರುವುದು ಅವರು ಎಡಿಎಂಕೆಯಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸಲು ಸಿದ್ಧರಿದ್ದಾರೆ ಎನ್ನುವುದನ್ನು ಸೂಚಿಸಿದೆ.
ಶನಿವಾರ ಬೆಳಿಗ್ಗೆ ಇಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಸಿ.ಪೊನ್ನೈಯನ್ ಅವರು, ಪಕ್ಷವು ಪ್ರಜಾಸತ್ತಾತ್ಮಕವಾಗಿ ಕಾರ್ಯಾಚರಿಸಲಿದೆ ಮತ್ತು ಸರ್ವ ಸಾಧಾರಣ ಸಭೆಯನ್ನು ಕರೆಯಲಿದೆ. ನಾಯಕರು ಯಾರಾಗಬೇಕೆನ್ನುವುದನ್ನು ಸದಸ್ಯರೇ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿಯ ಆಯ್ಕೆ ಸರ್ವಾನುಮತದ ನಿರ್ಧಾರವಾಗಿರಲಿದೆ ಎಂದು ಹೇಳಿದ ಅವರು,ಕಾರ್ಯಕರ್ತರ ಬಗ್ಗೆ ಕಾಳಜಿ ವಹಿಸುವ ಮತ್ತು ಅಮ್ಮಾ ತೋರಿಸಿರುವ ದಾರಿಯಲ್ಲಿ ನಡೆಯುವ ಸಮರ್ಥ ವ್ಯಕ್ತಿಯನ್ನು ನಾವು ಆಯ್ಕೆ ಮಾಡಲಿದ್ದೇವೆ ಎಂದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಕೊನೆಯುಸಿರೆಳೆ ಯುವವರೆಗೂ ಅವರನ್ನು ಯಾರು ಭೇಟಿಯಾಗಬೇಕು ಎನ್ನುವುದನ್ನು ಶಶಿಕಲಾ(54)ರೇ ನಿರ್ಧರಿಸುತ್ತಿದ್ದರು. ಜಯಲಲಿತಾಗೆ ನೀಡಬೇಕಾದ ಚಿಕಿತ್ಸೆಗಳ ಬಗ್ಗೆ ಅವರೇ ವೈದ್ಯರೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಪಕ್ಷದ ಕಾರ್ಯಕರ್ತರು ಹೇಳುವಂತೆ ಜಯಲಲಿತಾರು ನಿಧನರಾದ ಬೆನ್ನಿಗೇ ಒ.ಪನ್ನೀರ್ ಸೆಲ್ವಂ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಲ್ಲಿ ಅವರ ಪಾತ್ರವು ಪ್ರಮುಖ ವಾಗಿತ್ತು.
ಜಯಲಲಿತಾರ ಅಂತ್ಯ ಸಂಸ್ಕಾರದ ಸಂದರ್ಭ ಅಂತಿಮ ವಿಧಿವಿಧಾನಗಳನ್ನು ಶಶಿಕಲಾ ಅವರೇ ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಂತಹ ವಿವಿಐಪಿಗಳು ವ್ಯಕ್ತಪಡಿಸಿದ್ದ ಸಂತಾಪಗಳನ್ನು ಅವರೇ ಸ್ವೀಕರಿಸಿದ್ದರು.
ಒಂದು ಕಾಲದಲ್ಲಿ ಪುಟ್ಟ ವೀಡಿಯೊ ಕ್ಯಾಸೆಟ್ ಅಂಗಡಿಯನ್ನಿಟ್ಟುಕೊಂಡಿದ್ದ ಮಹಿಳೆಗೆ ನೂತನ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಚಿವರು ಸಲಾಂ ಹೊಡೆಯುತ್ತಿರುವುದು ಎಡಿಎಂಕೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ ಎಂಬ ಟೀಕೆಗೆ ಕಾರಣಾಗಿದೆ.
ಕಳೆದ ಮೂರು ದಿನಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವನ್, ಹಿರಿಯ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಜಯಲಲಿತಾರ ಪೋಯೆಸ್ ಗಾರ್ಡನ್ ನಿವಾಸದಲ್ಲಿ ಶಶಿಕಲಾರನ್ನು ಭೇಟಿಯಾಗಿ ಮಾತುಕತೆಗಳನ್ನು ನಡೆಸಿದ್ದಾರೆ. ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಶಶಿಕಲಾರಿಗೆ ನಿಷ್ಠೆಯನ್ನು ತೋರಿಸುತ್ತಿರುವುದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿವೆ.
ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪೊನ್ನೈಯನ್, ಮುಖ್ಯಮಂತ್ರಿಗಳು, ಸಚಿವರು, ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗಳು ಪೋಯೆಸ್ ಗಾರ್ಡನ್‌ಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಅವರೇಕೆ ಶಶಿಕಲಾ ಅಮ್ಮಾರನ್ನು ಭೇಟಿಯಾಗಬಾರದು? ಅವರು ಪಕ್ಷದಲ್ಲಿ ಮಹತ್ವದ ವ್ಯಕ್ತಿಯಾಗಿದ್ದಾರೆ. ಮುಖ್ಯಮಂತ್ರಿಗಳು ಸರಕಾರದ ಭಾಗವಾಗಿದ್ದಾರೆ, ಆದರೆ ಅವರು ಪಕ್ಷದ ಭಾಗವೂ ಆಗಿದ್ದಾರೆ. ಪಕ್ಷದ ವ್ಯವಹಾರಗಳು ಮುಂದುವರಿಯಬೇಕು ಮತ್ತು ಅವರು ಪಕ್ಷದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದರು. ಶಶಿಕಲಾ ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ.
ಶುಕ್ರವಾರ ಶಶಿಕಲಾ ಜಯಲಲಿತಾರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು. ಪನ್ನೀರ್ ಸೆಲ್ವಂ ಅವರು ಜೊತೆಯಲ್ಲಿದ್ದರಾದರೂ,ಶಶಿಕಲಾ ಸಮಾಧಿಯ ಸಮೀಪ ತೆರಳಿದಾಗ ದೂರವೇ ನಿಂತಿದ್ದರು.







