‘ವಾರದ ಸಂತೆ’ ನಗರ ಸಭೆ ನಿರ್ಣಯ ತಿರುಚಿದ ಆರೋಪ
ವಿಪಕ್ಷ ಬಿಜೆಪಿ ಸದಸ್ಯರಿಂದ ಉಪವಿಭಾಗಾಧಿಕಾರಿಗೆ ದೂರು
ಪುತ್ತೂರು,ಡಿ.10 : ಪುತ್ತೂರಿನ ಕೇಂದ್ರ ಸ್ಥಳವಾದ ಕಿಲ್ಲೆ ಮೈದಾನದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆಗೆ ಸಂಬಂಧಿಸಿ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಸರಿಯಾಗಿ ದಾಖಲಿಸದೆ ತಿರುಚಲಾಗಿದೆ ಎಂದು ಆರೋಪಿಸಿ ಪುತ್ತೂರು ನಗರಸಭೆಯ 12 ಮಂದಿ ವಿಪಕ್ಷ ಬಿಜೆಪಿ ಸದಸ್ಯರು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶುಕ್ರವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ನಡೆಸುವ ಕುರಿತು ವಿವರವಾಗಿ ಚರ್ಚಿಸಲಾಗಿದ್ದು, ಕಿಲ್ಲೆ ಮೈದಾನದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆಯನ್ನು ಮುಂದಿನ ದಿನಗಳಲ್ಲಿ ಪ್ರತೀ ಸೋಮವಾರ ಕಿಲ್ಲೆ ಮೈದಾನದಲ್ಲಿಯೇ ನಡೆಸುವುದೆಂದು ಮತ್ತು ಕಿಲ್ಲೆ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂತೆ ನಡೆಸಲು ಅವಕಾಶ ನೀಡಬಾರದೆಂದು ಬಹುಮತದಿಂದ ನಿರ್ಣಯಿಸಲಾಗಿದೆ. ಈ ಹಿಂದೆ ಆಗಸ್ಟ್ 19ರಂದು ನಡೆದಿದ್ದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯವನ್ನು ಸರಿಯಾಗಿ ದಾಖಲಿಸದೆ ತಿರುಚಿ ದಾಖಲಿಸಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ ಅವರ ನೇತೃತ್ವದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಭಂಡಾರಿ , ಸದಸ್ಯರಾದ ರಾಜೇಶ್ ಬನ್ನೂರು, ಜೀವಂಧರ್ ಜೈನ್,ರಾಮಣ್ಣ ಗೌಡ, ಸೋಮಪ್ಪ ಸಫಲ್ಯ,ಹರೀಶ್ ನಾಯ್ಕಾ, ಚಾಲಚಂದ್ರ,ಚಂದ್ರಸಿಂಗ್, ಸುಜೀಂದ್ರ ಪ್ರಭು,ವನಿತಾ ಕೆ.ಟಿ,ಯಶೋಧಾ ಹರೀಶ್ ಅವರು ನಿಯೋಗದಲ್ಲಿ ತೆರಳಿ ದೂರು ಸಲ್ಲಿಸಿದ್ದಾರೆ.





