ವೈದ್ಯಕೀಯ ಕ್ಷೇತ್ರದಲ್ಲಿಂದು ಮಹತ್ವಪೂರ್ಣ ಬದಲಾವಣೆಗಳಾಗುತ್ತಿವೆ: ಡಾ.ಶಾಂತರಾಮ ಶೆಟ್ಟಿ

ಕೊಣಾಜೆ,ಡಿ.10: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜಗತ್ತಿನಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗುತ್ತಿದ್ದು, ವೈದ್ಯಕೀಯ ಕ್ಷೇತ್ರವೂ ಈ ನಿಟ್ಟಿನಲ್ಲಿ ಮುಂದುವರಿದು ಸಾಧನೆ ಮಾಡುತ್ತಿರುವುದನ್ನು ನಾವು ಮನಗಾಣಬಹುದು. 1951ರಲ್ಲಿ ಅಮೇರಿಕಾದಲ್ಲಿ ಅಂಗಾಂಗ ಕಸಿಯ ಬಗ್ಗೆ ಪರಿಕಲ್ಪನೆ ಹುಟ್ಟಿಕೊಂಡು ಅಲ್ಲಿ ಮೊದಲಿಗೆ ಆರಂಭಗೊಂಡು ಬಳಿಕ ಉಳಿದೆಡೆಗೆ ವಿಸ್ತರಿಸಿತು. ಈ ನಿಟ್ಟಿನಲ್ಲಿ ಭಾರತವೂ ಕೂಡಾ ಇಂದು ಅಂಗಾಂಗ ದಾನ ಮತ್ತು ಕಸಿಯಲ್ಲಿ ಮಹತ್ವಪೂರ್ಣವಾದ ಸಾಧನೆಯನ್ನು ಮಾಡುತ್ತಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಆಶ್ರಯದಲ್ಲಿ ನಿಟ್ಟೆ ವಿವಿಯ ನೆಫ್ರಾಲಜಿ ವಿಭಾಗ, ಮೋಹನ್ ಪೌಂಡೇಶನ್ ಸಹಯೋಗದಲ್ಲಿ ನಡೆದ ‘ಅಂಗಾಂಗ ದಾನ ಮತ್ತು ಕಸಿ- ವೈದ್ಯರು ತಿಳಿದುಕೊಳ್ಳಬೇಕಾದ ಮುಖ್ಯಾಂಶಗಳು’ ಕಾರ್ಯಾಗಾರವನ್ನು ಶನಿವಾರ ದೇರಳಕಟ್ಟೆಯ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ವಿಶಂತಿಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಯಾವುದೇ ಯೋಜನೆಗಳು ಯಶಸ್ವಿಯಾಗಿ ನಡೆಯುವುದಕ್ಕೆ ಟೀಮ್ ವರ್ಕ್ ಅತ್ಯಾವಶ್ಯಕ. ಅದೇ ವೈದ್ಯಕೀಯ ಕ್ಷೇತ್ರದಲ್ಲಿಯ ಕೆಲಸಗಳಲ್ಲಿ ಆಸಕ್ತಿ, ಟೀಮ್ ವರ್ಕ್ ಎಂಬುದು ಪರಿಣಾಮಕಾರಿಯಾಗುತ್ತದೆ. ಅಂಗಾಂಗ ಕಸಿಯ ಶಸ್ತ್ರ ಚಿಕಿತ್ಸೆಯಲ್ಲಿಯೂ ಅಂಗ ಕಸಿ ಕ್ಷೇತ್ರದ ವೈದ್ಯರು ಮಾತ್ರವಲ್ಲದೆ ಈ ಪ್ರಕ್ರಿಯೆಯಲ್ಲಿ ಮೂತ್ರಪಿಂಡ ತಜ್ಞರು, ಅರಿವಳಿಕೆ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು ಮುಂತಾದ ತಜ್ಞರ ಅವಶ್ಯಕತೆ ಮತ್ತು ಸಹಕಾರ ಖಂಡಿತಾ ಇದೆ. ಆದ್ದರಿಂದ ಟೀಮ್ ವರ್ಕ್ ಎಂಬುದು ಅಂಗಾಗ ಕಸಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಇಂತಹ ಕಾರ್ಯಾಗಾರಗಳು ಬಹಳ ಉಪಯುಕ್ತವಾಗಿದ್ದು ನಮ್ಮಲ್ಲಿರುವ ಜ್ಞಾನದ ಅರಿವನ್ನು ವಿಸ್ತರಿಸಲು ಬಹಳಷ್ಟು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಸತೀಶ್ ಭಂಡಾರಿ, ಮೋಹನ್ ಪೌಂಡೇಶನ್‌ನ ಸ್ಥಾಪಕ ಡಾ.ಸುನೀಲ್ ಶ್ರಾಫ್ಫ್, ನಿಫ್ರಾಲಜಿ ವಿಭಾಗದ ಮುಖ್ಯಸ್ಥೆ ಡಾ.ಶೋಭನಾ ನಾಯಕ್ ರಾವ್, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಪ್ರಕಾಶ್, ಡಾ.ಶಿವಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







