ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ. ನಾ ಮೊಗಸಾಲೆಯವರಿಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಮೂಡುಬಿದಿರೆ,ಡಿ.10: ಶಿವರಾಮ ಕಾರಂತ ಪ್ರತಿಷ್ಠಾನ ಕೊಡಮಾಡುವ 2016ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಯನ್ನು ಎಂಸಿಎಸ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಸಿದ್ಧ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಹದಿನೈದು ಸಾವಿರ ನಗದು, ಬೆಳ್ಳಿ ಸ್ಮರಣಿಕೆ, ಕಾರಂತ ಪ್ರತಿಮೆ, ಪ್ರಶಸ್ತಿ ಪತ್ರ ಹಾಗೂ ಶಿವರಾಮ ಕಾರಂತ ಪುರಸ್ಕಾರ ಪುರಸ್ಕೃತ ಹಿರಿಯ ಸಾಹಿತಿ ಡಾ. ನಾ ಮೊಗಸಾಲೆಯವರಿಗೆ ಹತ್ತು ಸಾವಿರ ನಗದು, ಬೆಳ್ಳಿ ಸ್ಮರಣಿಕೆ, ಪ್ರಶಸ್ತಿ ಪತ್ರ, ಕಾರಂತ ಪ್ರತಿಮೆಯನ್ನು ನೀಡುವ ಮೂಲಕ ವಿಧಾನ ಪರಿಷತ್ತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನಗೈದರು.
ಬಳಿಕ "ನನ್ನ ನೆನಪಿನೊಳಗೆ ಶಿವರಾಮ ಕಾರಂತ" ವಿಷಯದ ಕುರಿತು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ಪರಿಸರ ಕಾಳಜಿ ಮಿಳಿತಗೊಂಡ ವ್ಯಕ್ತಿತ್ವ ಹೊಂದಿದ್ದ ಕಾರಂತರು ನಡೆದಾಡುವ ವಿಶ್ವಕೋಶವಾಗಿದ್ದರು. ಅಳಿದ ಮೇಲೂ ಧೀಮಂತಿಕೆ ಉಳಿಸಿಕೊಂಡ ಸಾಹಿತಿಯಾಗಿದ್ದಾರೆ. ಅವರು ರಾಜಕಾರಣಿಗಳ ನಡೆಯನ್ನು ದ್ವೇಷಿಸುತ್ತಿದ್ದರೇ ಹೊರತು ರಾಜಕಾರಣವನ್ನಲ್ಲ. ಕಾರಂತರ ಆದರ್ಶಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ ಜಾಗತಿಕ ಸಾಹಿತ್ಯ ರಂಗದಲ್ಲಿ ವ್ಯೆವಿದ್ಯಮಯ ಆಸಕ್ತಿ ಬೆಳೆಸಿಕೊಂಡ ಬೆರೆಳೆಣಿಕೆಯ ಸಾಹಿತಿಗಳಲ್ಲಿ ಕಾರಂತರೂ ಒಬ್ಬರು. ಅವರಿಗೆ ದುಡಿಮೆಯ ಮೌಲ್ಯ ಸಾಮಾಜಿಕ ಋಣದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇತ್ತು. ಅಸಹಾಯಕರ ಬದುಕಿಗೆ ಸ್ಪಂದಿಸುವ ಗುಣವಿತ್ತು. ಇಂದಿನ ಯುವಜನತೆಗೆ ಆದರ್ಶ ವ್ಯಕ್ತಿಗಳ ಪರಿಚಯದ ಕೊರತೆ ಇದೆ. ಸಮೂಹ ಮಾಧ್ಯಮಗಳೂ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿರುವುದರಿಂದ ಕಾರಂತರಂತಹ ವ್ಯಕ್ತಿತ್ವದ ಪರಿಚಯ ಇಂದಿನ ಯುವಜನತೆಗೆ ಅಗತ್ಯವಿದೆ ಎಂದರು.
ಡಾ. ನಾ. ಮೊಗಸಾಲೆ ಮಾತನಾಡಿ ಕರಾವಳಿಯನ್ನು ಪ್ರತಿನಿಧಿಸುತ್ತಿರುವ ರಾಜಕಾರಣಿಗಳು ಸಾಹಿತ್ಯ ಸಾಂಸ್ಕೃತಿಕ ರಂಗವನ್ನು ಕಡೆಗಣಿಸುವುದರಿಂದ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಕವಿ ರತ್ನಾಕರ ವರ್ಣಿ, ಶಿವರಾಮ ಕಾರಂತ, ಅಡಿಗರಂತಹ ಮಹಾನ್ ಸಾಹಿತಿಗಳು ಮೂಲೆ ಗುಂಪಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರತ್ನಾಕರ ವರ್ಣಿ ಹಾಗೂ ಶಿವರಾಮ ಕಾರಂತರ ಪ್ರತಿಷ್ಠಾನ ಸ್ಥಾಪನೆಗೊಳ್ಳಬೇಕು. ಸರ್ಕಾರದಿಂದ ಅನುದಾನ ಪಡೆದುಕೊಂಡು ನಿರಂತರ ಚಟುವಟಿಕೆಗಳ ಮೂಲಕ ಅವರ ಸಾಧನೆಯನ್ನು ಚಿರಸ್ಥಾಯಿಗೊಳಿಸಬೇಕು ಎಂದರು.
ಮಾಜಿ ಸಚಿವ, ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಶಿವರಾಮ ಕಾರಂತರ ಸಾಹಿತ್ಯ ಕೃತಿಗಳ ವಿಮರ್ಶೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಹಾಗೂ ಡಾ. ನಾ. ಮೊಗಸಾಲೆಯವರ ಹೊಸ ಕಾದಂಬರಿ "ಧಾತು" ಅನಾವರಣಗೊಳಿಸಲಾಯಿತು. ಶ್ರೀಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಎಂ.ಸಿ.ಎಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ವಂದಿಸಿದರು. ಸಮಿತಿಯ ಸದಸ್ಯ ಕೆ. ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು.







