ರಂಗಭೂಮಿ ಮನುಷ್ಯರನ್ನು ಮುಖಾಮುಖಿಯಾಗುವ ಜೀವಂತ ಕಲೆ : ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಬಸವಲಿಂಗಯ್ಯ

ಉಡುಪಿ, ಡಿ.10: ಮನುಷ್ಯ ಮನುಷ್ಯರು ಮುಖಾಮುಖಿ ಆಗುವ ಜೀವಂತ ಕಲೆ ರಂಗಭೂಮಿ. ಇಂದು ವಿಜ್ಞಾನ ಮತ್ತು ಕಲೆ ಸೇರಿಕೊಂಡು ಜ್ಞಾನದ ಜೊತೆಯಾಗಿ ಸಾಗಬೇಕಾಗಿದೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ದಕ್ಷಿಣ ಭಾರತದ ನಿರ್ದೇಶಕ ಬಸವಲಿಂಗಯ್ಯ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ಉಡುಪಿ ರಂಗಭೂಮಿಯ ಸುವರ್ಣ ರಂಗಭೂಮಿ ಸಂಭ್ರಮದ ಸಮಾರೋಪ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಎಲ್ಲ ಕಲೆಗಳಿಗೂ ಮೂಲ ಕಲೆಯಾಗಿರುವುದು ರಂಗಭೂಮಿ. ಆದರೆ ವೇಗವಾಗಿ ಸಾಗುತ್ತಿರುವ ಇಂದಿನ ಯುಗದಲ್ಲಿ ಕಲೆ, ರಂಗಭೂಮಿ ಬೇಡವಾಗಿದೆ. ಮಾಹಿತಿ ತಂತ್ರಜ್ಞಾನವೇ ಬಹಳ ಮುಖ್ಯವಾಗಿದೆ. ಇಂದಿನ ಯುವ ಜನತೆ ಕೇವಲ ಹೆಸರು ಮತ್ತು ಹಣಕ್ಕಾಗಿ ರಂಗಭೂಮಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಕಲಾವಿದರ ವೇಷಧಾರಿಗಳಾಗಿದ್ದಾರೆ. ಆದರೆ ನಮಗೆ ನಿಜವಾದ ಕಲಾವಿದರು ಬೇಕಾಗಿದ್ದಾರೆ ಎಂದರು.
ವೌಲ್ಯಗಳು ಪತನಗೊಳ್ಳುತ್ತಿವೆ. ಆಧುನೀಕತೆ ಎಂಬುದು ಎಲ್ಲೆಲ್ಲೊ ಸಾಗು ತ್ತಿದೆ. ಟಿವಿ ಮಾಧ್ಯಮಗಳಲ್ಲಿ ಬರುವ ಧಾರವಾಹಿಗೆ ಕಥೆ, ಚರಿತ್ರೆ ಎಂಬುದೇ ಇಲ್ಲ. ಅದು ಇಂದು ಮುರ್ಖರ ಕೈಗೆ ಸಿಕ್ಕಿ ಈ ಸ್ಥಿತಿ ಎದುರಿಸುತ್ತಿದೆ. ಹೆಣ್ಣು ಮಕ್ಕಳನ್ನು ಹೆಣ್ಣು ಮಕ್ಕಳ ವಿರುದ್ಧವೇ ಕಟ್ಟಿಕೊಡುವ ಕೆಲಸ ಟಿವಿ ಮಾಧ್ಯಮ ಮಾಡುತ್ತಿದೆ. ಟಿವಿ ವಿಜ್ಞಾನದ ಬಹುದೊಡ್ಡ ಕೊಡುಗೆ. ಅದರ ಜೊತೆ ಕಲೆಯು ಸೇರಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಎಚ್.ಶಾಂತಾರಾಮ್ ವಿಶ್ವಕನ್ನಡ ನಾಟಕ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ದಿ.ಕೆ.ಆನಂದ ಗಾಣಿಗರ ಸಂಸ್ಮರಣೆಯನ್ನು ರಂಗಭೂಮಿ ಉಪಾಧ್ಯಕ್ಷ ವಾಸುದೇವ ರಾವ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷಡಾ.ಎಚ್.ಶಾಂತರಾಮ್ ವಹಿಸಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಎಂ. ಸಾಲ್ಯಾನ್, ಉದ್ಯಮಿ ಮನೋಹರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಸುವರ್ಣ ರಂಗಭೂಮಿಯ ಕಾರ್ಯಾಧ್ಯಕ್ಷರಾದ ಯು.ಉಪೇಂದ್ರ, ಡಾ.ಅರವಿಂದ ನಾಯಕ್ ಅಮ್ಮುಂಜೆ, ರಂಗಭೂಮಿ ಕಾರ್ಯದರ್ಶಿ ರವಿ ರಾಜ್ ಎಚ್.ಪಿ. ಉಪಸ್ಥಿತರಿದ್ದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಎಂ. ನಂದಕುಮಾರ್ ವಂದಿಸಿದರು. ಯು.ದುಗ್ಗಪ್ಪ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಬೆಂಗಳೂರಿನ ಏಷ್ಯನ್ ಥಿಯೇಟರ್ ತಂಡದಿಂದ ‘ವರಾಹ ಪುರಾಣ’ ನಾಟಕ ಪ್ರದರ್ಶನಗೊಂಡಿತು.







