ಮೂಡುಬಿದಿರೆ: ಉಚಿತ ಕೃತಕ ಕಾಲು ಜೋಡಣಾ ಶಿಬಿರ

ಮೂಡುಬಿದಿರೆ,ಡಿ.10: ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ, ಜೈನ್ ಮಿಲನ್ ಮೂಡುಬಿದಿರೆ ಮತ್ತು ಮೀನಾ ಎ.ಡಿ.ಡಿ. ಚಾರಿಟಿ ಇನಿಷಿಯೇಟಿವ್ ಫೌಂಡೇಶನ್ ಮತ್ತು ಕೆ.ಎಂ.ವೈ.ಎಫ್. ಕರ್ನಾಟಕ ಮಾರ್ವಾರಿ ಯೂತ್ ಫೆಡರೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರ ರವಿವಾರ ಶ್ರೀ ಧವಲಾ ಕಾಲೇಜಿನಲ್ಲಿ ಜರುಗಿತು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ ಶಿಬಿರದ ಉದ್ಘಾಟನೆ ನೆರವೇರಿಸಿ, ಎ.ಡಿ.ಡಿ. ಚಾರಿಟಿ ಇನಿಷಿಯೇಟಿವ್ ಫೌಂಡೇಶನ್‌ನ ಸಮಾಜಮುಖಿ ಕಾರ್ಯಕ್ರಮವನ್ನು ಮೂಡುಬಿದಿರೆಯಲ್ಲಿ ಆಯೋಜಿಸಿದ ಜೈನ್ ಮಿಲನ್ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಫೌಂಡೇಶನ್‌ನ ಕರ್ನಾಟಕದ ಸಂಯೋಜಕಿ ಆಶಾ ಪ್ರಭು ಮುಖ್ಯ ಅತಿಥಿಯಾಗಿ ಮಾತನಾಡಿ, ಫಲಾನುಭವಿಗಳಿಗೆ ಈ ಕಾರ್ಯಕ್ರಮದ ಅರಿವನ್ನು ಮೂಡಿಸಿ ಸ್ಥಳೀಯರಲ್ಲದೆ ಸಾಗರ, ಗದಗ, ತುಮಕೂರಿನ ಫಲಾನುಭವಿಗಳೂ ಭಾಗವಹಿಸುವಂತೆ ಕಾರ್ಯಕ್ರಮವನ್ನು ಆಯೋಜಿಸಿದ ಜೈನ್ ಮಿಲನ್‌ನಿಂದ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ. ಫಲಾನುಭವಿಗಳ ಮಂದಹಾಸವು ನಮ್ಮ ಜೀವನದಲ್ಲಿ ಧನ್ಯತಾ ಭಾವವನ್ನು ಮೂಡಿಸುತ್ತದೆ ಎಂದರು.
ಜೈನ್ ಮಿಲನ್ ಅಧ್ಯಕ್ಷ ಹೆಚ್.ಧನಕೀರ್ತಿ ಬಲಿಪ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಮಾಣಿಕ್ಯರಾಜ್ ಅಜ್ರಿ, ವಲಯ ನಿರ್ದೇಶಕ ಜಯರಾಜ್ ಕಂಬಳಿ, ಮುಖ್ಯ ತಂತ್ರಜ್ಞ ಮುರಳಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ನಿರಂಜನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ನಮಿರಾಜ್ ಜೈನ್ ಧನ್ಯವಾದವಿತ್ತರು.
55 ಮಂದಿ ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.







