ಪ್ರಜ್ಞಾ ಸ್ಥಿತಿಯಲ್ಲಿ ಮೆದುಳು ಗಡ್ಡೆಯ ಯಶಸ್ವಿ ಶಸ್ತ್ರ ಚಿಕಿತ್ಸೆ
ಶಿವಮೊಗ್ಗ ಮೆಟ್ರೋ ಆಸ್ಪತ್ರೆಯ ವೈದ್ಯರ ಸಾಹಸ 4-5ಗಂಟೆ ರೋಗಿಯೊಂದಿಗೆ ಮಾತನಾಡುತ್ತಲೇ ನಡೆದ ಶಸ್ತ್ರ ಚಿಕಿತ್ಸೆ
ಶಿವಮೊಗ್ಗ, ಡಿ. 10: ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಮೆದುಳಿನ ಗಡ್ಡೆಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ನರ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಎನ್. ಮಧುಸೂದನ್ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಇಂತಹ ಶಸ್ತ್ರ ಚಿಕಿತ್ಸೆ ನಡೆದಿರುವುದು ಇದೇ ಮೊದಲು. ರೋಗಿ ಪೂರ್ಣ ಎಚ್ಚರವಿದ್ದ ಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಮೆದುಳಿನ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯನ್ನು ಪ್ರಜ್ಞೆ ತಪ್ಪಿಸಲಾಗುತ್ತದೆ. ಮೆದುಳಿನ ಸೂಕ್ಷ್ಮ ಭಾಗದ ಗಡ್ಡೆಗಳಾದ ಕೈ, ಕಾಲು ಮತ್ತು ಧ್ವನಿಯನ್ನು ನಿಯಂತ್ರಿಸುವ ಮೆದುಳಿನ ಭಾಗದಲ್ಲಿ ತೊಂದರೆ ಇದ್ದರೆ ಮಾತ್ರ ಪ್ರಜ್ಞೆ ತಪ್ಪಿಸದೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದರು.
ಈ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಶಿವಮೊಗ್ಗ ತಾಲೂಕು ಮಂಡಘಟ್ಟ ನಿವಾಸಿ, 40ರ ಹರೆಯದ ರತ್ನಮ್ಮ ಎನ್ನುವವರಿಗೆ ನೆರವೇರಿಸಲಾಗಿದೆ. ರೋಗಿಗೆ ಯಾವುದೇ ರೀತಿಯ ನ್ಯೂನತೆ ಸಂಭವಿಸುವುದನ್ನು ತಡೆಗಟ್ಟಲು ಅವರನ್ನು ಸಂಪೂರ್ಣ ಪ್ರಜ್ಞಾ ಸ್ಥಿತಿಯಲ್ಲಿ ಪರೀಕ್ಷಿಸುತ್ತಾ ನೆರವೇರಿಸಲಾಗಿದೆ ಎಂದು ಹೇಳಿದರು.
ಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರೋಗಿಯೊಂದಿಗೆ ಸತತವಾಗಿ ಮಾತನಾಡಲಾಗುತ್ತದೆ. ಸುಮಾರು 4ರಿಂದ 5ಗಂಟೆ ಶಸ್ತ್ರ ಚಿಕಿತ್ಸೆ ನಡೆದಿದ್ದು ತಲೆಯನ್ನು ಸಂಪೂರ್ಣವಾಗಿ ತೆರೆಯಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಬಳಿಕ ರೋಗಿ ಸಂಪೂರ್ಣ ಗುಣಮುಖವಾಗಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಡಾ. ಟಿ.ಎಸ್.ತೇಜಸ್ವಿ, ಡಾ.ಜಿ.ಎಲ್.ರವೀಂದ್ರ, ಡಾ. ಪ್ರವೀಣ ಮೊದಲಾದವರಿದ್ದರು.







