ಸಾಲ ಬಾಧೆ: ರೈತ ಆತ್ಮಹತ್ಯೆ
ಚಿಕ್ಕವುಗಳೂರು, ಡಿ.10: ಸಾಲ ಬಾಧೆ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಲಿಂಮ್ಲಾಪುರ ಎಂಬಲ್ಲಿ ನಡದಿದೆ.
ಮೃತ ರೈತನನ್ನು ತುಂದ್ರಭದ್ರಪ್ಪ(37) ಎಂದು ಗುರುತಿಸಲಾಗಿದೆ. ಈತ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಜಮೀನು ಅಭಿವೃದ್ದಿಗಾಗಿ ಕೆರೆಸಂತೆಯ ವಿಎಸ್‌ಎಸ್‌ಎನ್ ಸೊಸೈಟಿಯಲ್ಲಿ 40 ಸಾವಿರ ರೂ. ಸಾಲ ತೆಗೆದು ಟೊಮಾಟೊ ಬೆಳೆ ಹಾಕಿದ್ದ. ಬೋರ್‌ವೆಲ್‌ನಲ್ಲಿ ನೀರಿನ ಕೊರತೆ ಎದುರಾದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದಿಂದ 50 ಸಾವಿರ ರೂ. ಸಾಲ ಹಾಗೂ ಕೆಲವು ಸ್ತ್ರೀಶಕ್ತಿ ಸಂಘಗಳಿಂದಲೂ ಕೈಗಡ ರೂಪದ ಹಣ ಪಡೆದಿದ್ದ ಎಂದು ಮೃತನ ಸಹೋದರನ ಪುತ್ರ ಎಸ್.ವಿ.ಹಾಲಪ್ಪಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಲ ತೀವ್ರ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಸರಿಯಾದ ಬೆಳೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ತಕ್ಷಣ ಆತನನ್ನು ಗಮನಿಸಿದ ಸ್ಥಳೀಯರು ಹತ್ತಿರದ ಬಾಣಾವರ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅರಸೀಕೆರೆ ಸರಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗಿದೆ.







