ಜೂನಿಯರ್ ಹಾಕಿ ವಿಶ್ವಕಪ್: ಕ್ವಾರ್ಟರ್‌ಫೈನಲ್‌ನತ್ತ ಭಾರತ

ಲಕ್ನೋ, ಡಿ.10: ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಮೆಂಟ್‌ನ ತನ್ನ ಎರಡನೆ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5-3 ಅಂತರದಿಂದ ರೋಚಕವಾಗಿ ಮಣಿಸಿದ ಭಾರತ ಕ್ವಾರ್ಟರ್‌ಫೈನಲ್‌ನತ್ತ ಹೆಜ್ಜೆ ಇಟ್ಟಿದೆ.
ಮೊದಲ ಹಾಗೂ ಕೊನೆಯ ಕೆಲವು ನಿಮಿಷ ಹೊರತುಪಡಿಸಿ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದ ಭಾರತದ ಪರ ಪರ್ವಿಂದರ್ ಸಿಂಗ್(24ನೆ ನಿಮಿಷ), ಅರ್ಮಾನ್ ಖುರೇಷಿ(35), ಹರ್ಮನ್‌ಪ್ರೀತ್ ಸಿಂಗ್(37ನೆ), ಸಿಮ್ರಾನ್‌ಜೀತ್ ಸಿಂಗ್(45ನೆ) ಹಾಗೂ ವರುಣ್ ಕುಮಾರ್(59ನೆ) ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ನೆರವಾದರು.
ಇಂಗ್ಲೆಂಡ್‌ನ ಪರವಾಗಿ ಜಾಕ್ ಕ್ಲೀ(10ನೆ ನಿಮಿಷ), ವಿಲ್ ಕಾಲ್ನನ್(63ನೆ) ಹಾಗೂ ಎಡ್ವರ್ಡ್ ಹಾಲಿಯರ್(67ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು.
ಭಾರತ 18ನೆ ನಿಮಿಷದಲ್ಲಿ ಮೊದಲ ಗೋಲು ಬಿಟ್ಟುಕೊಟ್ಟಿತು. ಆದರೆ, ತಕ್ಷಣವೇ ತಿರುಗೇಟು ನೀಡಿದ ಭಾರತ ಮೊದಲಾರ್ಧದಲ್ಲಿ 2-1 ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿದ ಭಾರತ ಇನ್ನೂ ಮೂರು ಗೋಲು ಬಾರಿಸಿತು. ಅಂತಿಮ ಆರು ನಿಮಿಷದಲ್ಲಿ ಎರಡು ಗೋಲು ಬಾರಿಸಿದ ಇಂಗ್ಲೆಂಡ್ ತಂಡ ಭಾರತದ ಮುನ್ನಡೆಯನ್ನು ತಗ್ಗಿಸಿತು.







