2017ರ ಐಪಿಎಲ್‌ಗೆ ಅಕ್ರಂ ಅಲಭ್ಯ

ಕೋಲ್ಕತಾ, ಡಿ.9: ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಸೀಮ್ ಅಕ್ರಮ್ 2017ರ ಋತುವಿನ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿಲ್ಲ. ವೈಯಕ್ತಿಕ ಬದ್ಧತೆ ಹಾಗೂ ಸಮಯದ ಅಭಾವ ಇದಕ್ಕೆ ಕಾರಣ ಎನ್ನಲಾಗಿದೆ.
‘‘ಕಳೆದ ಕೆಲವು ವರ್ಷಗಳಿಂದ ಕೆಕೆಆರ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಅಕ್ರಂ ಈ ಬಾರಿ ನಮ್ಮ ತಂಡದೊಂದಿಗೆ ಇರುವುದಿಲ್ಲ. 2012 ಹಾಗೂ 2014ರಲ್ಲಿ ಕೆಕೆಆರ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಅಕ್ರಂ ಪ್ರಮುಖ ಪಾತ್ರವಹಿಸಿದ್ದರು’’ ಎಂದು ಕೆಕೆಆರ್ ತಂಡದ ಆಡಳಿತ ನಿರ್ದೇಶಕ ಹಾಗೂ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.
‘‘ಕೆಕೆಆರ್ ತಂಡದಲ್ಲಿ ಕೆಲಸ ಮಾಡುವುದನ್ನು ನಾನು ತುಂಬಾ ಇಷ್ಟಪಡುವೆ. ಕಳೆದ ಕೆಲವು ವರ್ಷಗಳಿಂದ ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು. ಈ ಬಾರಿ ನಾನು ಖಂಡಿತವಾಗಿಯೂ ಡ್ರೆಸ್ಸಿಂಗ್ ರೂಮ್‌ನ್ನು ತಪ್ಪಿಸಿಕೊಳ್ಳುತ್ತಿರುವೆ. ತಂಡ ಇನ್ನಷ್ಟು ಯಶಸ್ಸು ಕಾಣಬೇಕೆಂದು ಹಾರೈಸುವೆ ಎಂದು ಅಕ್ರಂ ಹೇಳಿದ್ದಾರೆ.
ಜೂನ್‌ಗೆ 50ರ ವಸಂತಕ್ಕೆ ಕಾಲಿಡಲಿರುವ ಅಕ್ರಂ 2010ರಿಂದ ಕೆಕೆಆರ್ ತಂಡದ ಕೋಚಿಂಗ್ ಸ್ಟಾಫ್‌ನಲ್ಲಿದ್ದಾರೆ. 2013ರಲ್ಲಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಕೆಕೆಆರ್ ತಂಡದಿಂದ ದೂರ ಉಳಿದಿದ್ದರು.
10ನೆ ಆವೃತ್ತಿಯ ಐಪಿಎಲ್ ಟೂರ್ನಿಯು ಮುಂದಿನ ವರ್ಷದ ಎಪ್ರಿಲ್ 5 ರಿಂದ ಆರಂಭವಾಗಲಿದೆ.







