ಟ್ರಂಪ್ ಗೆಲುವಿಗಾಗಿ ರಶ್ಯ ಹಸ್ತಕ್ಷೇಪ: ಸಿಐಎ ಆರೋಪ
ವಾಶಿಂಗ್ಟನ್,ಡಿ.10: ಡೊನಾಲ್ಡ್ ಟ್ರಂಪ್ ಗೆಲುವಿಗೆ ನೆರವಾಗುವ ಉದ್ದೇಶದಿಂದ ರಶ್ಯವು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿತ್ತೆಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎನ ವರದಿಯೊಂದು ಬಹಿರಂಗಪಡಿಸಿದೆ.
ಟ್ರಂಪ್ ಗೆಲುವಿಗೆ ನೆರವಾಗುವುದೇ ರಶ್ಯದ ಗುರಿಯಾಗಿತ್ತೆಂದು, ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಬೇಹುಗಾರಿಕಾ ವಿಷಯಗಳಿಗೆ ಸಂಬಂಧಿಸಿ ಸೆನೆಟರ್‌ಗಳಿಗೆ ನೀಡಿದ ವಿವರಣೆಯೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುವಂತೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಟ್ರಂಪ್‌ರನ್ನು ಗೆಲ್ಲಿಸುವ ಉದ್ದೇಶದಿಂದಲೇ ರಶ್ಯವು 2016 ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿತ್ತೆಂದು ಸಿಐಎ ಅಭಿಪ್ರಾಯಿಸಿದೆಯೆಂದು ವರದಿ ಹೇಳಿದೆ. ಆದಾಗ್ಯೂ, ಟ್ರಂಪ್ ಪಾಳಯವು ಈ ವರದಿಯನ್ನು ನಿರಾಕರಿಸಿದೆ. ‘‘ಇದೇ ವ್ಯಕ್ತಿಗಳು ಸದ್ದಾಂ ಬಳಿ ಸಮೂಹ ನಾಶದ ಅಸ್ತ್ರಗಳು ಇದ್ದವೆಂದು ಕೂಡಾ ಹೇಳಿದ್ದರು’’ ಎಂದು ತಂಡವು ಸಿಐಎ ಅಧಿಕಾರಿಗಳ ವಿರುದ್ಧ ಕಟಕಿಯಾಡಿದೆ.
‘‘ಅಮೆರಿಕದಲ್ಲಿ ಚುನಾವಣೆ ನಡೆದು ಬಹಳ ಸಮಯವಾಯಿತು. ಅಮೆರಿಕವನ್ನು ಮತ್ತೊಮ್ಮೆ ಮಹಾನ್ ಆಗುವಂತೆ ಮಾಡಲು ಮುಂದಡಿಯಿಡುವ ಕಾಲ ಈಗ ಬಂದಿದೆ’’ ಎಂದವರು ಹೇಳಿದರು.
ಹಿಲರಿ ಕ್ಲಿಂಟನ್‌ರ ಚುನಾವಣಾ ಪ್ರಚಾರ ಅಧ್ಯಕ್ಷರು ಸೇರಿದಂತೆ ಡೆಮಾಕ್ರಾಟಿಕ್ ಪಕ್ಷದ ರಾಷ್ಟ್ರೀಯ ಸಮಿತಿ ಹಾಗೂ ಇತರರ ಇಮೇಲ್‌ಗಳನ್ನು ಹ್ಯಾಕ್ ಮಾಡಿ, ಅವುಗಳನ್ನು ವಿಕಿಲೀಕ್ಸ್‌ಗೆ ಒದಗಿಸಿದ ವ್ಯಕ್ತಿಗಳನ್ನು ಸಿಐಎ ಗುರುತಿಸಿದ್ದು, ಅವರಿಗೆ ರಶ್ಯ ಸರಕಾರದ ಜೊತೆ ನಂಟಿರುವುದನ್ನು ದೃಢಪಡಿಸಿದೆ.
ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಹಾಗೂ ಕ್ಲಿಂಟನ್ ಗೆಲ್ಲುವ ಅವಕಾಶಕ್ಕೆ ಧಕ್ಕೆ ಯುಂಟುಮಾಡಲು ರಶ್ಯವು ಈ ಕಾರ್ಯಾ ಚರಣೆಯನ್ನು ನಡೆಸಿತ್ತೆಂದು ಸಿಐಎ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಆರೋಪಗಳನ್ನು ಟ್ರಂಪ್ ಬಲವಾಗಿ ನಿರಾಕರಿಸಿದ್ದಾರೆ.





